ಭೋಪಾಲ್ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮೂವರು ಆರೋಪಿಗಳ ಅಕ್ರಮ ಮನೆಗಳನ್ನು ಜಿಲ್ಲಾಡಳಿತ ಕೆಡವಿ ಹಾಕಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಏನಿದು ಪ್ರಕರಣ?: ರೇವಾ ಜಿಲ್ಲೆಯಲ್ಲಿರುವ ದೇವಸ್ಥಾನವೊಂದಕ್ಕೆ ಅಪ್ರಾಪ್ತೆಯು ತನ್ನ ಸ್ನೇಹಿತನೊಂದಿಗೆ ಹೋಗಿದ್ದಳು. ಇಬ್ಬರೂ ಹರಟೆ ಹೊಡೆಯುತ್ತಿದ್ದಾಗ ಅಲ್ಲಿಗೆ ಬಂದ ನಾಲ್ವರು ವ್ಯಕ್ತಿಗಳು ಹಾಗೂ ಇಬ್ಬರು ಅಪ್ರಾಪ್ತರು ಸ್ನೇಹಿತನ ಮುಂದೆ ಬಾಲಕಿಯನ್ನು ಎಳೆದೊಯ್ದಿದ್ದಾರೆ. ಆ ಬಳಿಕ ನದಿಯ ಬಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಲಕಿಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರಿನ ಪ್ರಕಾರ, ಆ ಯುವತಿ ಮತ್ತು ಆಕೆಯ ಸ್ನೇಹಿತ ತಮ್ಮನ್ನು ರಕ್ಷಿಸುವಂತೆ ಬೇಡಿಕೊಂಡರೂ ಆರೋಪಿಗಳು ಬಿಡಲಿಲ್ಲ. ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ನಂತರ, ಅವರು ಅವಳನ್ನು ಥಳಿಸಿದ್ದಾರೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳ ಪೈಕಿ ಮೂವರ ಬಂಧನ ಮಾಡಿದ್ದು, ಉಳಿದವರಿಗೋಸ್ಕರ ಶೋಧ ನಡೆಸುತ್ತಿದ್ದಾರೆ.










