ಅಭಿನಯ ಶಾರದೆ ಜಯಂತಿ ಅವರ ನಿಧನಕ್ಕೆ ಗಣ್ಯರ ಸಂತಾಪ…

85
firstsuddi

ಬೆಂಗಳೂರು : ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಜಯಂತಿಯವರ ನಿಧನಕ್ಕೆ ಸಂತಾಪ ಸೂಚಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರು, ‘ಅಭಿನಯ ಶಾರದೆ’ ಜಯಂತಿ ಅವರು ನಿಧನರಾದ ಸಂಗತಿ ಬೇಸರ ತರಿಸಿದೆ. ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿಯಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ದಕ್ಷಿಣ ಭಾರತದ ಪ್ರಖ್ಯಾತ ನಟಿ ಎನಿಸಿಕೊಂಡಿದ್ದರು. ಅವರು ಕನ್ನಡಿಗರೆಂಬುದೇ ನಮ್ಮ ಹೆಮ್ಮೆ. ಅವರಿಗೆ ಸದ್ಗತಿ ದೊರೆಯಲಿ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಅಭಿಜಾತ ಪ್ರತಿಭೆಯ ಮೂಲಕ ದಶಕಗಳ ಕಾಲ ಚಿತ್ರಪ್ರೇಮಿಗಳ ಮನಗೆದ್ದಿದ್ದ ಮತ್ತು ನನ್ನ ಇಷ್ಟದ ನಟಿ, ಅಭಿನಯ ಶಾರದೆ ಜಯಂತಿಯವರ ನಿಧನದಿಂದ ಅತೀವ ದುಃಖವಾಗಿದೆ. ಜಯಂತಿ ಅವರು ತಮ್ಮ ಚಿತ್ರಗಳ ಮೂಲಕ ಸದಕಾಲ ನಮ್ಮೆಲ್ಲರ ಮನದಲ್ಲಿ ಅಜರಾಮಾರವಾಗಿ ಇರುತ್ತಾರೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯನವರು ಸಂತಾಪ ಸೂಚಿಸಿದ್ದಾರೆ.

ತಮ್ಮ ಮನೋಜ್ಞ ನಟನೆಯಿಂದ ‘ಅಭಿನಯ ಶಾರದೆ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ನಟಿ ಜಯಂತಿ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ತಾವು ಅಭಿನಯಿಸುತ್ತಿದ್ದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುತ್ತಿದ್ದ ಜಯಂತಿ ಅವರು ಬೆಳ್ಳಿ ತೆರೆಯ ಸ್ವರ್ಣ ಕಮಲದಂತಿದ್ದರು ಎಂದು ಡಿ.ಕೆ.ಶಿವಕುಮಾರ್ ಅವರು ಬಣ್ಣಿಸಿದ್ದಾರೆ.

‘ಜೇನುಗೂಡು’ ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಪ್ರವೇಶಿಸಿದ್ದ ನಟಿ ಜಯಂತಿ ಕನ್ನಡದ ಒಟ್ಟು 190 ಸಿನಿಮಾ ಸೇರಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿನಯ ಶಾರದೆ ಎನಿಸಿಕೊಂಡಿದ್ದರು. ಇವರು ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹೀಗೆ ಆರು ಭಾಷೆ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತಿ ಹೊಂದಿದ್ದರು. ಮೃತರ ಕುಟುಂಬ, ಬಂಧುಮಿತ್ರರಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಾರ್ಥಿಸಿದ್ದಾರೆ.