ಫಿಲಡೆಲ್ಫಿಯಾ: ಅಮೆರಿಕದಲ್ಲಿ ಮತ್ತೊಂದು ವಿಮಾನ ಅಪಘಾತ ಸಂಭವಿಸಿದೆ. ಫಿಲಡೆಲ್ಫಿಯಾದಲ್ಲಿ ಸಣ್ಣ ವಿಮಾನವೊಂದು ಟೇಕಾಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದೆ. ಶಾಪಿಂಗ್ ಮಾಲ್ ಬಳಿ ವಿಮಾನ ಪತನಗೊಂಡಿದ್ದು, ಭಾರೀ ಬೆಂಕಿ ಹೊತ್ತಿಕೊಂಡಿದೆ. ಅಪಘಾತದ ಪ್ರದೇಶದಲ್ಲಿ ಮನೆಗಳು ಮತ್ತು ಕಾರುಗಳು ಸುಟ್ಟು ಕರಕಲಾಗಿವೆ. ವರದಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಈ ಘಟನೆಯಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕನಿಷ್ಠ ಇಬ್ಬರನ್ನು ಹೊತ್ತಿದ್ದ ವಿಮಾನ ಶಾಪಿಂಗ್ ಮಾಲ್ ಬಳಿ ಪತನಗೊಂಡು ಸಂಭವಿಸಿದ ಬೆಂಕಿ ಅನಾಹುತದಲ್ಲಿ ಭಾರಿ ಸಾವು ನೋವು ಸಂಭವಿಸಿರಬಹುದು ಎಂದು ರಾಯ್ಟರ್ಸ್ ವರದಿ ಮಾಡಿದೆ. ಪೆನ್ಸಿಲ್ವೇನಿಯಾದ ಗವರ್ನರ್ ಜೋಶ್ ಶಾಪಿರೋ ಇದನ್ನು ದೃಢಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಿಮಾನ ನಿಲ್ದಾಣದಿಂದ 6:06 p.m. ಕ್ಕೆ ಸಣ್ಣ ಜೆಟ್ ಟೇಕ್ ಆಫ್ ಆಗಿದೆ. ಅಲ್ಲಿಂದ 1,600 ಅಡಿ ಎತ್ತರಕ್ಕೆ ಏರಿದ ಬಳಿಕ ಸುಮಾರು 30 ಸೆಕೆಂಡುಗಳ ನಂತರ ರಾಡಾರ್‍ನಿಂದ ವಿಮಾನ ಕಣ್ಮರೆಯಾಗಿದೆ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.










