ಅಮೆರಿಕಾದಲ್ಲಿ ರಿಷಬ್ ಶೆಟ್ಟಿಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ಪ್ರದಾನ…

78
firstsuddi

ಕಾಂತಾರ ಸಿನಿಮಾ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ಪತ್ನಿ ಪ್ರಗತಿ ಶೆಟ್ಟಿ ಜೊತೆಗೂಡಿ ಅಮೆರಿಕಾದ ವಾಷಿಂಗ್ಟನ್ ನ ಸಿಯಾಟಲ್ ಗೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ ರಿಷಬ್ ಶೆಟ್ಟಿ ಅವರಿಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅಲ್ಲಿನ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ರಿಷಬ್ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಸೆನೆಟರ್ ಡಾ. ದೆರೀಕ್ ಟ್ರಸ್ಫರ್ಡ್ ಸಹ ಉಪಸ್ಥಿತರಿದ್ದರು. 1800ಕ್ಕೂ ಹೆಚ್ಚು ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಮೆರಿಕಾ ಹಾಗೂ ವಾಷಿಂಗ್ಟನ್ ನಗರಕ್ಕೆ ಕನ್ನಡಿಗರು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದ ಟ್ರಸ್ಫರ್ಡ್ ಅವರು, ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾವನ್ನು ‘ಯೂನಿವರ್ಸಲ್ ಸಿನಿಮಾ’ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಅಮೆರಿಕಾದ ಇಡೀ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ರಿಷಬ್ ಶೆಟ್ಟಿ ಅವರು ‘ನನಗೆ ಅನೇಕ ಕಾರ್ಯಕ್ರಮಕ್ಕೆ ಬರೋಕೆ ಆಹ್ವಾನ ಇತ್ತು. ಆದರೆ, ಯಾವುದಕ್ಕೂ ಬರೋಕೆ ಆಗಿರಲಿಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ನಾನು ಆಗಮಿಸಿದೆ. ನನಗೆ ನಿಜಕ್ಕೂ ಖುಷಿ ಆಗುತ್ತಿದೆ. ಕನ್ನಡಿಗರ ನೋಡಲು ಸಾಕಷ್ಟು ಸಂತೋಷ ಆಗುತ್ತಿದೆ. ಕನ್ನಡಿಗರಿಂದಾಗಿ ನಾನು ಇಲ್ಲಿದ್ದೇನೆ’ ಎಂದರು.

ವಾಷಿಂಗ್ಟನ್ ನ ಸಿಯಾಟಲ್ ನಗರದ ಪ್ಯಾರಾಮೌಂಟ್ ಥಿಯೇಟರ್ ಗೆ 95 ವರ್ಷಗಳ ಇತಿಹಾಸ ಇದೆ. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಹಲವು ಗಣ್ಯರು ಈ ವೇದಿಕೆ ಮೇಲೆ ನಿಂತು ಭಾಷಣ ಮಾಡಿದ್ದಾರೆ. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿದೆ ಎನ್ನುವುದು ವಿಶೇಷ. ಇಂತಹ ಥಿಯೇಟರ್ ನಲ್ಲಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪಡೆದಿರುವುದಕ್ಕೆ ರಿಷಬ್ ಶೆಟ್ಟಿ ಸಂತಸಪಟ್ಟಿದ್ದಾರೆ. ಚಿನ್ನದ ಲೇಪನ ಹೊಂದಿರುವ ಈ ಟ್ರೋಫಿ, ಸುಮಾರು ಐದು ಕೆಜಿ ತೂಕವಿದೆ.