ಬೀಜಿಂಗ್: ಈ ವಾರ ತೈವಾನ್ಗೆ ಭೇಟಿ ನೀಡಿದ್ದ ಅಮೆರಿಕ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ವಿರುದ್ಧ ಚೀನಾದ ವಿದೇಶಾಂಗ ಸಚಿವಾಲಯವು ಇಂದು ಹಲವು ನಿರ್ಬಂಧಗಳನ್ನು ಘೋಷಿಸಿದೆ.
ಪೆಲೋಸಿ ಅವರು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ ಮತ್ತು ಚೀನಾದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಹಾಳು ಮಾಡುತ್ತಿದ್ದಾರೆ. ಬೀಜಿಂಗ್, ಪೆಲೋಸಿ ಮತ್ತು ಅವರ ಹತ್ತಿರದ ಕುಟುಂಬದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.
ಚೀನಾ ಒಳಗೊಂಡಿರುವ ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಸುಳ್ಳುಗಳನ್ನು ಹರಡಿದ ಅಮೆರಿಕದ ಅಧಿಕಾರಿಗಳ ಬಹಿರಂಗಪಡಿಸದ ಪಟ್ಟಿಯ ಮೇಲೆ ಚೀನಾ ವೀಸಾ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ಈ ವರ್ಷದ ಮಾರ್ಚ್ ನಲ್ಲಿ ಬೀಜಿಂಗ್ ತಿಳಿಸಿತ್ತು.
ಇನ್ನು ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯಿಂದ ಆಕ್ರೋಶಗೊಂಡಿರುವ ಚೀನಾ ಕಳೆದ ಎರಡು ದಿನಗಳಿಂದ ತೈವಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಸೇನಾ ತಾಲೀಮು ನಡೆಸುತ್ತಿದ್ದು, ಅದರಲ್ಲಿ 100 ಕ್ಕೂ ಹೆಚ್ಚು ಯುದ್ಧವಿಮಾನಗಳು ಮತ್ತು 10 ಯುದ್ಧನೌಕೆಗಳು ಭಾಗವಹಿಸಿವೆ ಎಂದು ಬೀಜಿಂಗ್ ಪ್ರಕಟಿಸಿದೆ.










