ಇಟಾನಗರ: ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಚೀನಾ ಮರುನಾಮಕರಣ ಮಾಡಿದ್ದು, ಅದನ್ನು ಜಂಗ್ನಾನ್, ಟಿಬೆಟ್ ನ ದಕ್ಷಿಣ ಭಾಗ ಎಂದು ಕರೆದಿದೆ.
ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾವು ಇದು ಮೂರನೇ ಬಾರಿಗೆ ಮರುನಾಮಕರಣ ಮಾಡಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಚೀನಾದ ಕ್ಯಾಬಿನೆಟ್, ಸ್ಟೇಟ್ ಕೌನ್ಸಿಲ್ ನೀಡಿದ ಭೌಗೋಳಿಕ ಹೆಸರುಗಳ ಮೇಲಿನ ನಿಯಮಗಳಿಗೆ ಅನುಸಾರವಾಗಿ ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಬಿಡುಗಡೆ ಮಾಡಿದೆ.
ಚೀನಾ ಬಿಡುಗಡೆ ಮಾಡಿರುವ ಹೆಸರುಗಳ ಪಟ್ಟಿಯಲ್ಲಿ ಅರುಣಾಚಲ ಪ್ರದೇಶದ 5 ಪರ್ವತ ಶಿಖರಗಳು, 2 ಭೂ ಪ್ರದೇಶಗಳು, 2 ವಸತಿ ಪ್ರದೇಶಗಳು ಮತ್ತು 2 ನದಿಗಳು ಸೇರಿವೆ. ಈ ಮೊದಲು 2017ರಲ್ಲಿ 6 ಹೆಸರಗಳನ್ನು ಹಾಗೂ 2021ರಲ್ಲಿ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಮರುನಾಮಕರಣ ಮಾಡಿತ್ತು.
ಈ ಬಗ್ಗೆ ಭಾರತ ಪ್ರತಿಕ್ರಿಯಿಸಿದ್ದು, ಆವಿಷ್ಕಾರ ಮಾಡುವ ಹೆಸರಿನಿಂದಾಗಿ ನಿಜಸ್ಥಿತಿ ಬದಲಾಗುವುದಿಲ್ಲ ಎಂದು ಹೇಳಿದೆ. ನಾವು ಇಂತಹ ವರದಿಗಳನ್ನು ನೋಡಿದ್ದೇವೆ. ಚೀನಾ ಇಂತಹ ಪ್ರಯತ್ನ ಮಾಡಿರುವುದು ಇದೇ ಮೊದಲಲ್ಲ. ಅರುಣಾಚಲ ಪ್ರದೇಶವು ಯಾವತ್ತಿಗೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವ ಪ್ರಯತ್ನಗಳು ಈ ವಾಸ್ತವತೆಯನ್ನು ಬದಲಾಯಿಸುವುದಿಲ್ಲ ಎಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.










