ಅಶ್ವಿನಿ ಕುರಿತ ಅವಹೇಳನಕಾರಿ ಟ್ವೀಟ್: ಕಾನೂನು ಕ್ರಮಕ್ಕೆ ಮುಂದಾದ ಅಪ್ಪು ಅಭಿಮಾನಿಗಳು…

55
firstsuddi

ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಇತ್ತೀಚೆಗೆ ಆರ್​ಸಿಬಿ ಅನ್​ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆ ಬಳಿಕ ನಡೆದ ಪಂದ್ಯಗಳಲ್ಲಿ ಆರ್​ಸಿಬಿ ಸೋಲು ಕಾಣುತ್ತಿದೆ. ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಬೆಂಗಳೂರು ತಂಡ ಸೋತಿದೆ. ಇದಕ್ಕೆ ಕೆಲವರು ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರನ್ನು ಹೊಣೆ ಮಾಡಿದ್ದರು. ಅವರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪೊಲೀಸ್ ಕಮಿಷನರ್ ಭೇಟಿ ಮಾಡಿ ಈಗಾಗಲೇ ದೂರು ಕೂಡ ನೀಡಲಾಗಿದೆ.

ಗಜಪಡೆ ಹೆಸರಿನ ಪೇಜ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಕೆಟ್ಟದಾಗಿ ನಿಂದನೆ ಮಾಡಲಾಗಿದ್ದು, ನಟ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿದೆ ಈ ‘ಗಜಪಡೆ’ ಖಾತೆ. ಅಭಿಮಾನದ ನೆಪದಲ್ಲಿ ಹೆಣ್ಣಿನ ಬಗ್ಗೆ ಕೀಳಾಗಿ ಕಾಮೆಂಟ್ ಮಾಡಿದ್ದರೆಂದು ಅನೇಕರು ಈ ಗಜಪಡೆ ಖಾತೆಯನ್ನು ನಿರ್ವಹಿಸುತ್ತಿರುವವರ ಬಗ್ಗೆ ಗರಂ ಆಗಿದ್ದಾರೆ.

ದೂರಿನಲ್ಲಿ ಏನಿದೆ?
‘ಕಳೆದ ಮಾರ್ಚ್ ತಿಂಗಳ 19ನೇ ತಾರೀಕಿನಂದು ಬೆಂಗಳೂರಿನ ಆರ್​ಸಿಬಿ ತಂಡದ ಜೆರ್ಸಿ ಉದ್ಘಾಟನೆ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು. ಅದರಂತೆ ಅಶ್ವಿನಿ ಅವರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಐಪಿಎಲ್ ಪ್ರಾರಂಭವಾಗಿ ಆರ್​ಸಿಬಿ ತಂಡವು ಕೆಲ ಪಂದ್ಯಗಳಲ್ಲಿ ಸೋತ ಕಾರಣ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್​ನಲ್ಲಿ ‘ಗಜ ಪಡೆ’ ಎಂಬ ನಕಲಿ ಖಾತೆ ಸೃಷ್ಟಿಸಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದೇ ಆರ್​ಸಿಬಿ ತಂಡದ ಸೋಲಿಗೆ ಕಾರಣ ಎಂದು ಅಶ್ವಿನಿ ಅವರನ್ನು ಸೋಲಿನ ಹೊಣೆ ಮಾಡಿದರು. ಜೊತೆಗೆ ಅವರನ್ನು ಕೆಟ್ಟದಾಗಿ ನಿಂದಿಸಿ ಪೋಸ್ಟ್ ಮಾಡಲಾಗಿದೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

‘ಇದಾದ ನಂತರ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದಾಗ ಆ ನಕಲಿ ಖಾತೆಯ ಹೆಸರನ್ನು ‘ಸುದೀಪ್ ಅಭಿಮಾನಿ’ ಎಂದು ಬದಲಾಯಿಸಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಹಾಗೂ ಸುದೀಪ್ ಅವರ ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗುವಂತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಸೃಷ್ಟಿಸಿರುತ್ತಾನೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಅವರಿಗೆ ಅವಮಾನ ಮಾಡಿರುತ್ತಾನೆ. ಈ ಘಟನೆಯಿಂದ ಕರ್ನಾಟಕದ ರಾಜವಂಶದ ಅಭಿಮಾನಿಗಳಿಗೆ ತುಂಬಾ ನೋವು ಉಂಟಾಗಿದೆ. ಹಾಗಾಗಿ ಅವನನ್ನು ಶೀಘ್ರದಲ್ಲಿ ಬಂಧಿಸಿ ಅವನಿಗೆ ತಕ್ಕ ಶಿಕ್ಷೆ ನೀಡಬೇಕಾಗಿ ಕೋರುತ್ತಿದ್ದೇವೆ’ ಎಂದು ದೂರಿನಲ್ಲಿ ಬರೆಯಲಾಗಿದೆ.