ಆಕ್ಷೇಪಾರ್ಹ ಹೇಳಿಕೆ- ನಟ ಉಪೇಂದ್ರ ವಿರುದ್ಧ ಮತ್ತೊಂದು ಎಫ್.ಐ.ಆರ್ ದಾಖಲು…

137
firstsuddi

ನಿನ್ನೆಯಷ್ಟೇ ಸ್ಯಾಂಡಲ್‌ವುಡ್ ನಟ ಉಪೇಂದ್ರ ಮೇಲೆ ಎಫ್ಐಆರ್ ದಾಖಲಾಗಿತ್ತು. ಸಮುದಾಯವೊಂದನ್ನು ನಿಂದಿಸಿದ ಆರೋಪದ ಮೇಲೆ ಉಪೇಂದ್ರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಅವರು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.

ಇದೀಗ ಉಪೇಂದ್ರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ರಣಧೀರ ಪಡೆ ಹರೀಶ್ ಕೊಟ್ಟ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೂವರೆಗೂ ಉಪೇಂದ್ರ ವಿರುದ್ದ ಎರಡು ಎಫ್ಐಆರ್ ದಾಖಲಾಗಿದ್ದು, ವಿಚಾರಣೆ ಎದುರಿಸಬೇಕಾಗಿದೆ.

ಲೈವ್ ವಿಡಿಯೋನಲ್ಲಿ ಮಾತನಾಡಿದ್ದ ನಟ ಉಪೇಂದ್ರ, ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ತಮ್ಮದೇ ವಾರಗೆಯ ಇತರೆ ಕೆಲವು ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಮತವನ್ನು ಯಾವುದೇ ಪ್ರಚಾರವಿಲ್ಲದೆ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು. ಬಳಿಕ ಮಾತು ಮುಂದುವರೆಸಿ ಯಾವುದೋ ಮಾತಿಗೆ “ಊರೆಂದರೆ ಹೊಲೆಗೇರಿ ಇದ್ದೇ ಇರುತ್ತದೆ” ಎಂದು ಹೊಲೆಗೇರಿಯನ್ನು ತುಚ್ಛವಾಗಿ ಕಾಣುವ ಗಾದೆಯೊಂದನ್ನು ಹೇಳಿದ್ದರು. ಉಪೇಂದ್ರರ ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಉಪೇಂದ್ರ ಮೇಲೆ ಪ್ರಕರಣ ದಾಖಲಾಗಿದ್ದು, ಎಸಿಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಯುತ್ತಿದೆ.