ಆತ್ಮಹತ್ಯೆಗೆ ಶರಣಾದ ಪಿಎಸ್‍ಐ ಹಗರಣದ ಬಂಧಿತ ಆರೋಪಿಯ ಸಹೋದರ.

67
firstsuddi

ಹಾಸನ : ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಆರೋಪಿಯೊಬ್ಬರ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗುಂಜೇವು ಗ್ರಾಮದ ಮನುಕುಮಾರ್ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿ. ಈತನ ಅಣ್ಣ ವಾಸು (36) ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್ 30ರಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ಮನುಕುಮಾರ್ ನನ್ನು ಅರೆಸ್ಟ್ ಮಾಡಿದ್ದಾರೆ. ಪ್ರಸ್ತುತ ಮನುಕುಮಾರ್ ಸಿಐಡಿ ಪೊಲೀಸರ ವಶದಲ್ಲಿದ್ದಾನೆ.

ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್‌ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಸು ಅವರನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ತಮ್ಮನ ಪಿಎಸ್ ಐ ಕೆಲಸಕ್ಕೆಂದು ಮಧ್ಯವರ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣವನ್ನು ವಾಸು ಹೊಂದಿಸಿಕೊಟ್ಟಿದ್ದರು ಎಂದು ಹೇಳಲಾಗಿದೆ. ಆದರೆ ಈಗ ಹಣವೂ ಹೊಯ್ತು, ತಮ್ಮನ ಕೆಲಸವೂ ಹೊಯ್ತು ಅಂತ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೃತ ವಾಸು ತಾಯಿ ಶಿವಮ್ಮ ಅವರು ಮಾತನಾಡಿ, ನನ್ನ ಮಗನ ಸಾವಿಗೂ, ಪಿಎಸ್ಐ ಅಕ್ರಮಕ್ಕೂ ಸಂಬಂಧ ಇಲ್ಲ. ಹಣ ಕಳೆದುಕೊಂಡ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಅನುಮಾನ ಇದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಾಯಿ ಶಿವಮ್ಮ ಹೇಳಿದ್ದಾರೆ. ಈ ಕುರಿತು ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.