ಚಿಕ್ಕಮಗಳೂರು: ಆಧುನಿಕತೆಯ ನಾಗಾಲೋಟದಲ್ಲಿ ಕಣ್ಮರೆಯಾಗುತ್ತಿರುವ ಪಾರಂಪರಿಕ ನಾಟಕಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ರಂಗಕರ್ಮಿ ಬಿ.ರವಿಕುಮಾರ್ ಹೇಳಿದರು.
ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಶನಿವಾರ ಪಾಲ್ಗೊಂಡು ಅವರು ಮಕ್ಕಳಿಗೆ ರಂಗ ತರಬೇತಿ ನೀಡಿದರು.
ಬಹಳಷ್ಟು ವರ್ಷಗಳ ಹಿಂದೆ ಹಳ್ಳಿಹಳ್ಳಿಗಳಲ್ಲೂ ಆಗಾಗ ನಾಟಕ ಪ್ರದರ್ಶನಗಳು ನಡೆಯುತ್ತಿದ್ದವು, ಆಗಿನ ಕಾಲದಲ್ಲಿ ಮಹಾತ್ಮರು, ಸಂತರು, ದೇಶಭಕ್ತರು, ಪುರಾಣ ಮತ್ತು ಇತಿಹಾಸದ ವ್ಯಕ್ತಿಗಳ ಕುರಿತು ನಾಟಕವಾಡಲಾಗುತ್ತಿತ್ತು ಅದರಿಂದಾಗಿ ನೋಡುಗರಿಗೆ ಮನರಂಜನೆಯ ಜೊತೆಗೆ ಪುರಾಣ ಮತ್ತು ಇತಿಹಾಸಗಳ ಜ್ಞಾನ ದೊರೆಯುತ್ತಿತ್ತು ಎಂದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ನಾಟಕಗಳ ಸಂಖ್ಯೆ ಹೆಚ್ಚಾಗಿದೆ, ಇಂದಿನ ನಾಟಕಗಳು ಪ್ರೇಕ್ಷಕರಿಗೆ ಕೇವಲ ಮನರಂಜನೆಯನ್ನಷ್ಟೇ ನೀಡುತ್ತಿವೆಯೇ ಹೊರೆತು ಅವರಲ್ಲಿ ಜ್ಞಾನವನ್ನು ಬೆಳೆಸುವ ಕೆಲಸ ಮಾಡುತ್ತಿಲ್ಲ ಇದರಿಂದಾಗಿ ನಮ್ಮ ಪುರಾಣ, ಇತಿಹಾಸ, ಮಹಾತ್ಮರು, ಸಂತರ ಜೀವನ ಮತ್ತು ಸಂದೇಶಗಳು ಜನರನ್ನು ತಲುಪುತ್ತಿಲ್ಲ ಎಂದು ವಿಷಾದಿಸಿದರು.
ಇದೇ ವೇಳೆ ನಿರ್ದೇಶನ, ಕಥೆ, ಅಭಿನಯ, ಸಂಭಾಷಣೆ, ಸಂಗೀತ ಸೇರಿದಂತೆ ನಾಟಕದ ವಿವಿಧ ಮಜಲುಗಳನ್ನು ಮಕ್ಕಳಿಗೆ ಪರಿಚಯಿಸಿದ ಅವರು ಕಥೆ, ಸಂಭಾಷಣೆ, ಅಭಿನಯ, ಸಂಗೀತ ಒಂದಕ್ಕೊಂದು ಪೂರಕವಾಗಿದ್ದರೆ ಮಾತ್ರ ನಾಟಕ ಯಶಸ್ವಿಯಾಗುತ್ತದೆ ಎಂದರು.
ರಂಗ ಕಲಾವಿದನಿಗೆ ತನ್ಮಯತೆ ಮುಖ್ಯ ಅವನು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದರೆ ಮಾತ್ರ ಪ್ರೇಕ್ಷಕರ ಮನದಲ್ಲಿ ಉಳಿಯುತ್ತಾನೆ ಎಂದು ತಿಳಿಸಿದರು.
ಭಾರತ ಸೇವಾದಳದ ತಾಲ್ಲೂಕು ಸಂಘಟಕ, ಶಿಬಿರದ ಆಯೋಜಕ ಎಸ್.ಈ.ಲೋಕೇಶ್ವರಾಚಾರ್ ಮಾತನಾಡಿ ಕಲೆ, ಸಾಹಿತ್ಯ, ಸಂಸ್ಕøತಿ, ಸಂಸ್ಕಾರ, ಯೋಗ, ದೇಶೀಯ ಕ್ರೀಡೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಈ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಗಾಯಕಿ ಮೀನಾಕುಮಾರಿ ವಿದ್ಯಾರ್ಥಿಗಳಿಗೆ ರಂಗಗೀತೆಗಳ ತರಬೇತಿ ನೀಡಿದರು.
Home ಸ್ಥಳಿಯ ಸುದ್ದಿ ಆಧುನಿಕತೆಯ ನಾಗಾಲೋಟದಲ್ಲಿ ಕಣ್ಮರೆಯಾಗುತ್ತಿರುವ ಪಾರಂಪರಿಕ ನಾಟಕಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು : ಬಿ.ರವಿಕುಮಾರ್…










