ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಮೈತ್ರಿ ಸರ್ಕಾರ ಜಾರಿಗೆ ತಂದಿದ್ದ ಕೆಲವು ಯೋಜನೆಗಳನ್ನು ನಿರ್ಲಕ್ಷಿಸಿದ್ದು, ಮೀಟರ್ ಬಡ್ಡಿ ದಂಧೆಯಿಂದ ಸಣ್ಣ ವ್ಯಾಪಾರಿಗಳನ್ನು ರಕ್ಷಿಸುವ ಉದ್ದೇಶದಿಂದ ಜಾರಿಗೆ ತಂದಿದ್ದ ಬಡವರ ಬಂಧು ಯೋಜನೆಯ ಬಗ್ಗೆ ಬಿಜೆಪಿ ಸರ್ಕಾರ ಯಾವುದೇ ಸೂಚನೆಯನ್ನು ನೀಡದಿರುವುದರ ಕುರಿತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವಿಟರ್ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆಪರೇಷನ್ ಕಮಲ ಕುಖ್ಯಾತಿಯ ಬಿ.ಎಸ್ ಯಡಿಯೂರಪ್ಪ ಅವರು ಮತ್ತೊಂದು ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ಬಹುಮತ ಸರ್ಕಾರ ನಿಗದಿಪಡಿಸಿದ್ದ ಕ್ಷೇತ್ರಗಳ ಅಭಿವೃದ್ಧಿಯ ಅನುದಾನವನ್ನು ಕಡಿತ ಮಾಡಿ ತಮ್ಮ ‘ಪಕ್ಷಪಾತಿ’ ನಿಲುವನ್ನು ಪ್ರತಿಪಾದಿಸಿದ್ದಾರೆ. ಅಗತ್ಯವಿದ್ದರೆ ಮತ್ತಷ್ಟು ನೀಡಲಿ. ಕೊಟ್ಟದ್ದನ್ನು ಕಿತ್ತುಕೊಳ್ಳುವುದು ಯಾವ ನ್ಯಾಯ? ಇದು ‘ನಾಚಿಕೆಗೇಡಿನ ರಾಜಕೀಯ’. ನಿಮಗೆ ದ್ವೇಷ ಇದ್ದದ್ದು ನನ್ನ ಮೇಲಲ್ಲವೇ ಯಡಿಯೂರಪ್ಪನವರೇ? ಆದರೆ ಬಡವರ ಮೇಲೇಕೆ ನಿಮ್ಮ ಕೋಪ? ಸೇಡಿನ ರಾಜಕೀಯ ಮಾಡುವುದಿಲ್ಲ ಎಂದು ಸದನದಲ್ಲಿ ಹೇಳಿದ್ದ ನೀವು ಅಧಿಕಾರ ವಹಿಸಿಕೊಂಡ ನಂತರ ನನ್ನ ಸರ್ಕಾರದ ಕಾರ್ಯಕ್ರಮಗಳ ವಿಷಯದಲ್ಲಿ ಮಾಡಿದ್ದೆಲ್ಲವೂ ಸೇಡಿನ ಕ್ರಮ. ‘ಬಡವರ ಬಂಧು’ ಯೋಜನೆಯನ್ನು ನಿರ್ಲಕ್ಷಿಸಿ ನೀವು ಬಡವರ ವಿರೋಧಿಯಾಗಿದ್ದೀರಿ. ಆರ್ಥಿಕವಾಗಿ ಅಶಕ್ತರಾದವರು, ಸಣ್ಣ ವ್ಯಾಪಾರಿಗಳನ್ನು ಲೇವಾದೇವಿದಾರರ ವಿಷವರ್ತುಲದಿಂದ ಪಾರು ಮಾಡುವ ಸದುದ್ದೇಶದಿಂದ ಬಡವರ ಬಂಧು ಕಾರ್ಯಕ್ರಮವನ್ನು ಜಾರಿಗೆ ತರಲಾಗಿತ್ತು. ಅಶಕ್ತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ಈ ಯೋಜನೆಯನ್ನು ಕೊಲ್ಲುತ್ತಿರುವ ನೀವು ಬಡವರ ಸ್ವಾಭಿಮಾನವನ್ನು ಕೆಣಕಿದ್ದೀರಿ ಯಡಿಯೂರಪ್ಪನವರೇ… ‘ಬಡವರ ಬಂಧು’ ಯೋಜನೆ ವಿಫಲವಾಗಬಾರದು. ಇದರಲ್ಲಿ ಜಾತಿ, ಧರ್ಮ, ಪಕ್ಷಗಳಿಲ್ಲ. ಅಶಕ್ತರನ್ನು ಸಬಲರನ್ನಾಗಿಸಿ ದೇಶದ ಅಭಿವೃದ್ಧಿಯಲ್ಲಿ ಅವರನ್ನೂ ಒಳಗೊಳ್ಳುವಂತೆ ಮಾಡುವ ಪ್ರಮುಖ ಅರ್ಥಿಕ ಚಟುವಟಿಕೆ. ಈ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರು ಚೈತನ್ಯ ತುಂಬಬೇಕು. ಇಲ್ಲವೇ, ಹೋರಾಟ ಎದುರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.










