ಹಾವೇರಿ : ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರಿನ ಬೀರಲಿಂಗೇಶ್ವರ ನಗರದಲ್ಲಿರುವ ಶಂಕರ್ ಮನೆ ಮೇಲೆ ನಿನ್ನೆ ತಡರಾತ್ರಿ ದಾಳಿ ನಡೆದಿದ್ದು, ಈ ವೇಳೆ ಆರ್.ಶಂಕರ್ ಗೃಹ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲು ಸಂಗ್ರಹಿಸಿಟ್ಟಿದ್ದ ಶಂಕರ್ ಭಾವಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ– ಲೋಟ ಹಾಗೂ ಎಲ್.ಕೆ.ಜಿ ಪದವಿ ಕಾಲೇಜು ಮಕ್ಕಳಿಗೆ ಹಂಚಲು ತಂದಿದ್ದ ಸ್ಕೂಲ್ ಬ್ಯಾಗ್ ಸಿಕ್ಕಿವೆ ಎಂದು ತಿಳಿದುಬಂದಿವೆ.
6000ಕ್ಕೂ ಹೆಚ್ಚು ಸೀರೆ, 9000 ಕ್ಕೂ ಹೆಚ್ಚು ಶಾಲಾ ಕಾಲೇಜು ಬ್ಯಾಗ್ ಗಳು ಸೇರಿದಂತೆ ತಟ್ಟೆಲೋಟಗಳು, ಸುಮಾರು 30-40 ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸೀಜ್ ಆಗಿರುವ ವಸ್ತುಗಳನ್ನು ಅಧಿಕಾರಿಗಳು ಪೊಲೀಸರ ವಶಕ್ಕೆ ನೀಡಿದ್ದಾರೆ. ಸುಮಾರು ಏಳು ಗಂಟೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಸುಮಾರು 8 ಕೊಟಿ ರೂಪಾಯಿ ವೆಚ್ಚದ ವಸ್ತುಗಳು ಪತ್ತೆಯಾಗಿವೆ ಎಂದು ಅಂದಾಜಿಸಲಾಗಿದ್ದು, ಈ ಎಲ್ಲ ವಸ್ತುಗಳ ಜಿಎಸ್‍ಟಿ ಬಿಲ್ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ ಶಂಕರ್, ಬಿಲ್ ಕೊಡಲು ಅವಕಾಶ ಕೇಳಿದ್ದಾರೆ. ಒಂದು ವೇಳೆ ಸರಿಯಾದ ಜಿಎಸ್ ಟಿ ಬಿಲ್ ಇಲ್ಲದಿದ್ರೆ ದಂಡ ವಿಧಿಸುವ ಸಾಧ್ಯತೆ ಇದೆ.










