ಯುಗಾದಿಗೆ ಊರಿಗೆ ತೆರಳುವ ಪ್ರಯಾಣಿಕರಿಗೆ ಶಾಕ್ – ಮಾ. 21ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ…

66
firstsuddi

ಬೆಂಗಳೂರು : ಯುಗಾದಿ ಹಬ್ಬಕ್ಕೆಂದು ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ರಾಜ್ಯ ಸಾರಿಗೆ ನೌಕರರ ಸಂಘ ಬಿಗ್ ಶಾಕ್ ಕೊಟ್ಟಿದೆ.

ಯುಗಾದಿ ಹಬ್ಬಕ್ಕೂ ಮುನ್ನಾ ದಿನ ಅಂದರೆ ಮಾರ್ಚ್ 21 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದೆ. ಮಾರ್ಚ್ 21ರಿಂದ ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗಲಿದೆ ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಹೆಚ್.ವಿ ಅನಂತ ಸುಬ್ಬರಾವ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಬಿ. ಶ್ರೀರಾಮುಲು ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಈ ಹಿಂದೆ ನಡೆದ ಹಲವು ಸಭೆಗಳಲ್ಲಿ ಹೇಳಿದ್ದರು. ಆದರೆ ಇದುವರೆಗೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಇತ್ತೀಚೆಗೆ ಸರ್ಕಾರಿ ನೌಕರರು, ವೇತನ ಹೆಚ್ಚಳ ಸಂಬಂಧ ಪ್ರತಿಭಟನೆ ಮಾಡಿದ ವೇಳೆ ಸಿಎಂ ಬೊಮ್ಮಾಯಿ ಶೇ.17 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದರು. ಆದರೆ ನಾವು ಇಷ್ಟು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಗಮನ ಹರಿಸುತ್ತಿಲ್ಲ. ಅವರು ಕೇವಲ ಶೇ 10 ರಷ್ಟು ಮಾತ್ರ ವೇತನ ಹೆಚ್ಚಿಸುವ ಭರವಸೆ ನೀಡಿದ್ದಾರೆ. ನಾವು ಅದನ್ನು ತಿರಸ್ಕರಿಸಿದ್ದೇವೆ. ಮಾರ್ಚ್ 21 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.

ಸಾರಿಗೆ ನೌಕರರ ಬೇಡಿಕೆಗಳೇನು?
1. ಮೂಲ ವೇತನಕ್ಕೆ ಶೇ. 25 ರಷ್ಟು ಹೆಚ್ಚಿಸಬೇಕು
2. ವೇತನ ಹೆಚ್ಚಳವೂ ಪರಿಷ್ಕೃತ ಮೂಲ ವೇತನದ ಶೇ.3 ರಷ್ಟಿರಬೇಕು.
3. ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಮೇಲಿನಂತೆಯೇ ಸಿದ್ದಪಡಿಸಬೇಕು
4. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ನೀಡಬೇಕು.
5. 2021ರ ಏಪ್ರಿಲ್ ನಲ್ಲಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸವೆಯಿಂದ ವಜಾಗೊಳಿಸಿದ ನೌಕರರನ್ನು ಷರತ್ತಿಲ್ಲದೆ ಮರು ನೇಮಕ ಮಾಡಬೇಕು.
6. ಮುಷ್ಕರದ ವೇಳೆ ಎಫ್ಐಆರ್ ದಾಖಲಿಸಿರುವ ನೌಕರರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು.
7. ಜಂಟಿ ಕ್ರಿಯಾ ಸಮಿತಿಯಿಂದ ಸಲ್ಲಿಸಿರುವ ಬೇಡಿಕೆಗಳನ್ನು ಆಡಳಿತ ವರ್ಗದವರು ಚರ್ಚಿಸಿ, ವಿಳಂಬವಿಲ್ಲದೆ ಈಡೇರಿಸಬೇಕು.