ಆಶಾಕಿರಣ ಯೋಜನೆಯಡಿ, ದೃಷ್ಟಿ ದೋಷ ಹೊಂದಿರುವ ಸುಮಾರು 2.45 ಲಕ್ಷ ಜನರಿಗೆ ಉಚಿತವಾಗಿ ಕನ್ನಡಕ ವಿತರಣೆ: ದಿನೇಶ್ ಗುಂಡೂರಾವ್.

39
firstsuddi

ಮಂಗಳೂರು: ಆಶಾಕಿರಣ ಯೋಜನೆಯಡಿ 8 ಜಿಲ್ಲೆಗಳಲ್ಲಿ ಎಲ್ಲಾ ಜನರ ಕಣ್ಣಿನ ತಪಾಸಣೆ ಬಹುತೇಕ ಪೂರ್ಣಗೊಂಡಿದೆ. ದೃಷ್ಟಿ ದೋಷ ಹೊಂದಿರುವ ಸುಮಾರು 2.45 ಲಕ್ಷ ಜನರಿಗೆ ಉಚಿತವಾಗಿ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ನಾಳೆ ಚಾಲನೆ ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಶಾಕಿರಣ’ ಯೋಜನೆ ದೃಷ್ಟಿ ದೋಷ ಹೊಂದಿದ ಅನೇಕ ಜನಸಾಮಾನ್ಯರ ಪಾಲಿಗೆ ಬೆಳಕಾಗಲಿದೆ. ಯೋಜನೆಯನ್ನ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ. ಹಾವೇರಿಯಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ಅವರು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆಶಾಕಿರಣ ಯೋಜನೆಯಡಿ ರಾಜ್ಯದ 8 ಜಿಲ್ಲೆಗಳಲ್ಲಿ ಎಲ್ಲಾ ಜನರ ಕಣ್ಣಿನ ತಪಾಸಣಾ ಕಾರ್ಯವನ್ನ ಆಶಾ ಕಾರ್ಯಕರ್ತೆಯರು ನಡೆಸಿದ್ದರು. ಮೊದಲ ಹಂತದಲ್ಲಿ ಹಾವೇರಿ, ಕಲಬುರಗಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 56, 59, 036 ಜನರನ್ನು ಆಶಾ ಕಾರ್ಯಕರ್ತೆಯರ ಮೂಲಕ ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿತ್ತು. ಇವರಲ್ಲಿ 8,28,884 ಜನರಿಗೆ ನೇತ್ರ ಸಂಬಂಧಿ ತೊಂದರೆಗಳು ಕಂಡುಬಂದಿದ್ದು, ದ್ವಿತೀಯ ಹಂತದ ಚಿಕಿತ್ಸೆಗೆ ಒಳಪಡಿಸಿದಾಗ 2,45,588 ಮಂದಿಗೆ ದೃಷ್ಟಿ ದೋಷ ಇರುವುದು ಪತ್ತೆಯಾಗಿದೆ. 2.45,588 ಜನರಿಗೂ ಉಚಿತ ಕನ್ನಡಕ ಒದಗಿಸುವ ಕಾರ್ಯ ನಾಳೆಯಿಂದ ಪ್ರಾರಂಭವಾಗಲಿದೆ. ಅಲ್ಲದೇ 39,336 ಜನರಿಗೆ ಕಣ್ಣಿನ ಪೊರೆ ತೊಂದರೆ ಕಂಡು ಬಂದಿದ್ದು, ಇವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನೂ ಕೂಡಾ ಉಚಿತವಾಗಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.