ರಾಮನಗರ: ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಮೂವರು ಕಾರ್ಮಿಕರು ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿ ನಡೆದಿದೆ.
ಬೆಂಕಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಜೀವ ದಹನವಾಗಿದ್ದು, ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮನೆಯೊಂದರಲ್ಲಿ ಪರ್ಫ್ಯೂಮ್ ಕೆಮಿಕಲ್ ಫಿಲ್ಲಿಂಗ್ ಮಾಡುತ್ತಿದ್ದ ಸಂದರ್ಭ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಘಟನೆ ನಡೆಯುವ ವೇಳೆ ಒಟ್ಟು 8 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಫಿಲ್ಲಿಂಗ್ ವೇಳೆ ಸ್ಫೋಟಗೊಂಡಿದ್ದು, ಇಡೀ ಮನೆಯನ್ನು ಆವರಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನೆಯಲ್ಲಿ ಮೂವರು ಸಜೀವ ದಹನವಾಗಿದ್ದು, ಉಳಿದ ಐವರು ಫ್ಯಾಕ್ಟರಿಯಿಂದ ಹೊರಗಡೆ ಓಡಿಬಂದಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಾಲೀಕರು ಯಾರು ಅನ್ನೋದರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಕುಂಬಳಗೋಡು ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆರ್‌ಆರ್ ಆಸ್ಪತ್ರೆಗೆ ರವಾನಿಸಲಾಗಿದೆ.










