ಇಂದಿನಿಂದ 3 ದಿನ ಸಿಎಂ ಜಿಲ್ಲಾ ಪ್ರವಾಸ – ಬೆಳಗಾವಿಯಲ್ಲಿ ಬೊಮ್ಮಾಯಿಗೆ ತಟ್ಟಲಿದೆ ರೈತರ ಪ್ರತಿಭಟನೆ ಬಿಸಿ…

60
firstsuddi

ಬೆಳಗಾವಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಬೊಮ್ಮಾಯಿ ಅವರಿಗೆ ರೈತರ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆ ಇದೆ.

ನೆರೆಸಂತ್ರಸ್ತರು, ಕಬ್ಬು ಬೆಳೆಗಾರರು ಇಂದಿನಿಂದ ಅಹೋರಾತ್ರಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದ ಪ್ರತಿಭಟನೆಯಲ್ಲಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ 200ಕ್ಕೂ ಹೆಚ್ವು ರೈತರು ಭಾಗಿಯಾಗುವ ಸಾಧ್ಯತೆ ಇದೆ. ಬೆಳಗ್ಗೆ 11ಕ್ಕೆ ಬೆಳಗಾವಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಿಎಂ ಗಮನ ಸೆಳೆಯುವ ನಿಟ್ಟಿನಲ್ಲಿ ರೈತರು ಧರಣಿ ನಡೆಸಲಿದ್ದಾರೆ. ಸಕ್ಕರೆ ಆಯುಕ್ತಾಲಯ ಕಚೇರಿ ಬೆಳಗಾವಿಗೆ ಸ್ಥಳಾಂತರಿಸಬೇಕು ಹಾಗೂ 2019 ಹಾಗೂ 2021ರ ಪ್ರವಾಹದ ನೆರೆಸಂತ್ರಸ್ತರಿಗೆ ಪರಿಹಾರ ನೀಡಬೇಕು, ಕಬ್ಬು ಬೆಳೆಗಾರರಿಂದ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳಿಂದ ಹಣ ಬಿಡುಗಡೆಗೆ ಕ್ರಮ ವಹಿಸುವುದು ಸೇರಿದಂತೆ ಈ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆಗೆ ರೈತರು ನಿರ್ಧರಿಸಿದ್ದಾರೆ.

ಇಂದಿನಿಂದ 3ದಿನಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಮಕೂರು, ಬೆಳಗಾವಿ, ಗದಗ, ಧಾರವಾಡ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಬೆಳಗ್ಗೆ 10ಕ್ಕೆ ರಾಜಭವನದ ಹೈಕೋರ್ಟ್ ನ್ಯಾಯಮೂರ್ತಿಗಳ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಅವರು ತುಮಕೂರಿಗೆ ತೆರಳಲಿದ್ದಾರೆ. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಬಳಿಕ ಆರೋಗ್ಯ ಇಲಾಖೆಯ ನೂತನ ಆಸ್ಪತ್ರೆಗಳು, ಪ್ರವಾಸಿಮಂದಿರ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.