ಇಂದು ಸಂಜೆಯೇ ಪುನೀತ್ ರಾಜ್‍ಕುಮಾರ್ ಅಂತ್ಯಕ್ರಿಯೆ…

80
firstsuddi

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದು, ಇಂದು ಸಂಜೆಯೇ ಪುನೀತ್ ಅವರ ಅಂತ್ಯಕ್ರಿಯೆಯನ್ನು ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಪುನೀತ್ ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 5.30ರ ಸುಮಾರಿಗೆ ಕಂಠೀರವ ಸ್ಟೇಡಿಯಂನಲ್ಲಿ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದು, ನಟನ ಅಂತಿಮ ದರ್ಶನವನ್ನು ಪಡೆಯಲು ಅಭಿಮಾನಿಗಳಿಗೆ ಇಂದು ಮಧ್ಯಾಹ್ನ 3 ಗಂಟೆಯವರಿಗೂ ವ್ಯವಸ್ಥೆಗೊಳಿಸಲಾಗಿದೆ, ನಂತರ ಕಂಠೀರವ ಸ್ಟುಡಿಯೋದವರೆಗೂ ಮೆರವಣಿಗೆ ನಡೆಸಲಾಗುತ್ತದೆ.

ಪುನೀತ್ ಪುತ್ರಿ ದ್ರಿತಿ ನ್ಯೂಯಾರ್ಕ್‍ನಿಂದ ದೆಹಲಿಗೆ ಆಗಮಿಸಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಸಂಜೆ 4.15ಕ್ಕೆ ಆಗಮಿಸಲಿದ್ದಾರೆ. ದ್ರಿತಿ ಅವರು ಬಂದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇನ್ನೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ ಆಪ್ತರಿಗಷ್ಟೇ ಅವಕಾಶ ಕಲ್ಪಿಸಿಕೊಡಲಾಗಿದೆ.

ನಟ ಪುನೀತ್ ರಾಜ್ ಕುಮಾರ್ ಅಂತಿಮ ವಿಧಿವಿಧಾನ ಕಾರ್ಯವನ್ನು ಪುನೀತ್ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ನೆರವೇರಿಸಲಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳಿರುವುದರಿಂದ ರಾಘವೇಂದ್ರ ಅವರ ಪುತ್ರನಿಂದ ಕಾರ್ಯ ನೆರವೇರಿಸಲು ರಾಜ್ ಕುಮಾರ್ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಕಂಠೀರವ ಸ್ಟೂಡಿಯೋದಲ್ಲಿ ನಡೆಯಲಿರುವ ಅಪ್ಪು ಅಂತ್ಯಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.