ನವದೆಹಲಿ : ಇಂದು ಸಂಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದ್ದು, ಹಲವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿ ಉಳಿದವರಿಗೆ ಮಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮೋದಿ ಸಂಪುಟಕ್ಕೆ ನಡೆಯುತ್ತಿರುವ ಬಹುದೊಡ್ಡ ಸರ್ಜರಿ ಇದಾಗಿದ್ದು, ಹೀಗಾಗಿ ಇಂದು ಯಾರಿಗೆಲ್ಲಾ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಮುಂದಿನ ವರ್ಷ ಉತ್ತರಪ್ರದೇಶ, ಪಂಜಾಬ್, ಗುಜರಾತ್, ಉತ್ತರಾಖಂಡ್ ನಲ್ಲಿ ಚುನಾವಣೆ ನಡೆಯಲಿರುವುದರಿಂದ ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಇಂದು ನಡೆಯುತ್ತಿರುವ ಸಚಿವ ಸಂಪುಟ ವಿಸ್ತರಣೆ ಮೋದಿಯವರಿಗೆ ಸವಾಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ 21 ಸಂಪುಟ ಸಚಿವರು, ಮಂತ್ರಿಗಳು, ಸ್ವತಂತ್ರ ಉಸ್ತುವಾರಿ ಹೊಂದಿರುವ 9 ಮಂತ್ರಿಗಳು ಮತ್ತು 23 ರಾಜ್ಯ ಸಚಿವರು ಇದ್ದಾರೆ. ಇಂದು ವಿಸ್ತರಣೆ ನಂತರ ಸಚಿವರ ಸಂಖ್ಯೆ 81ಕ್ಕೇರಬಹುದು ಎಂದು ಹೇಳಲಾಗಿದೆ.
ಇನ್ನೂ ರಾಜ್ಯದ ಮೂವರು ಸಂಸದರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಹಿನ್ನೆಲೆಯಲ್ಲಿ ಮೂವರೂ ನಾಯಕರು ನವದೆಹಲಿಗೆ ತೆರಳಿದ್ದು, ನಿರೀಕ್ಷೆಗಳು ಹೆಚ್ಚಾಗಿವೆ. ಸದ್ಯ ರಾಜ್ಯದಿಂದ ಮೂವರು ಸಂಸದರಿಗೆ ದೆಹಲಿಯಿಂದ ದೂರವಾಣಿ ಕರೆ ಬಂದಿದೆ. ಆನೇಕಲ್ ನಾರಾಯಣಸ್ವಾಮಿ, ರಮೇಶ್ ಜಿಗಜಿಣಗಿ, ಡಾ. ಉಮೇಶ್ ಜಾಧವ್ ವರಿಷ್ಠರ ಬುಲಾವ್ ಮೇರೆಗೆ ಮೂವರೂ ಸಂಸದರು ನವದೆಹಲಿಗೆ ತೆರಳಿದ್ದಾರೆ. ಲಿಂಗಾಯತ, ದಲಿತ ಮತ್ತು ಒಕ್ಕಲಿಗ ಕೋಟಾದಲ್ಲಿ ಕರ್ನಾಟಕದ ಸಂಸದರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಮಾಹಿತಿ ಇದೆ. ಆದರೆ ದೂರವಾಣಿ ಕರೆ ಬಾರದೆ ಇದ್ದರೂ ಸಂಸದೆ ಶೋಭಾ ಕರಂದ್ಲಾಜೆ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.










