ಇಂದು ಸಂಜೆ ಗುಜರಾತ್ ತೀರಕ್ಕೆ ಅಪ್ಪಳಿಸಲಿರುವ ‘ಬಿ​ಪೊ​ರ್‌​ಜೊ​ಯ್‌’ ಚಂಡಮಾರುತ…

65
firstsuddi

ಅಹಮದಾಬಾದ್: ಕಳೆದ ಹಲವು ದಿನಗಳಿಂದ ಭೀತಿ ಸೃಷ್ಟಿಸಿರುವ ‘ಬಿ​ಪೊ​ರ್‌​ಜೊ​ಯ್‌’ ಚಂಡಮಾರುತವು ಇಂದು ಗುಜ​ರಾ​ತ್‌​ನ ಕಚ್ ಜಿಲ್ಲೆಯ ಜಖಾವು ಬಂದರಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಚಂಡಮಾರುತ ಸಂಜೆ 5.30ರ ಹೊತ್ತಿಗೆ ಭಾರಿ ಭೂಕುಸಿತವನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮದ್ಯಾಹ್ನ 2.30 ಗಂಟೆಗೆ ‘ಬಿ​ಪೊ​ರ್‌​ಜೊ​ಯ್‌’ ಜಖಾವು ಬಂದರಿನ ಪಶ್ಚಿಮಕ್ಕೆ 200 ಕಿಮೀ ದೂರದಲ್ಲಿ ಕೇಂದ್ರಿಕೃತವಾಗಿದೆ ಎಂದು ಹವಾಮಾನ ಇಲಾಖೆಯ ಬುಲೆಟಿನ್‍ನಲ್ಲಿ ಹೇಳಿದೆ.

ಗುಜರಾತ್ ರಾಜ್ಯ ಸರ್ಕಾರವು ಕರಾವಳಿಯ ಎಂಟು ಜಿಲ್ಲೆಗಳ 74000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ರಕ್ಷಣಾ ಮತ್ತು ಪರಿಹಾರ ಕ್ರಮಗಳಿಗಾಗಿ ವಿಪತ್ತು ನಿರ್ವಹಣಾ ಘಟಕಗಳನ್ನು ನಿಯೋಜಿಸಿದೆ.

ಬಿ​ಪೊ​ರ್‌​ಜೊ​ಯ್‌’ ಚಂಡಮಾರುತ ಗುಜರಾತ್‍ನ ಕರಾವಳಿ ಪ್ರದೇಶಗಳಲ್ಲಿ ನಿನ್ನೆ ಭಾರಿ ಮಳೆಗೆ ಕಾರಣವಾಗಿದೆ. ಇಂದು ಕಚ್, ದೇವಭೂಮಿ ದ್ವಾರಕಾ ಮತ್ತು ಜಾಮ್‍ನಗರದ ಕೆಲವು ಸ್ಥಳಗಳಲ್ಲಿ ಭಾರೀ ಮತ್ತು ಅತಿ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ನೌಕಾಪಡೆ ಹಡಗುಗಳನ್ನು ಸಿದ್ಧ ಮಾಡಿಕೊಂಡಿದೆ. ಭಾರತೀಯ ನೌಕಾಪಡೆಯು ಇದಕ್ಕಾಗಿ ಸುಸಜ್ಜಿತ ನಾಲ್ಕು ಹಡಗುಗಳನ್ನು ಸನ್ನದ್ದಗೊಳಿಸಿದೆ. ಪೋರಬಂದರ್ ಮತ್ತು ಓಖಾ ಎರಡರಲ್ಲೂ ಐದು ಪರಿಹಾರ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ 15 ಪರಿಹಾರ ತಂಡಗಳು ಅಧಿಕಾರಿಗಳಿಗೆ ನೆರವು ಮತ್ತು ಬೆಂಬಲ ಒದಗಿಸಲು ಸಿದ್ದವಾಗಿವೆ. ಇದಲ್ಲದೇ ಗೋವಾದ ಐಎನ್‍ಎಸ್ ಹಂಸಾ ಮತ್ತು ಮುಂಬೈನ ಐಎನ್‍ಎಸ್ ಶಿಕ್ರಾದಲ್ಲಿ ನೆಲೆಸಿರುವ ಹೆಲಿಕಾಪ್ಟರ್‌ಗಳು ಗುಜರಾತ್‍ಗೆ ತಕ್ಷಣದ ನೆರವು ನೀಡಲು ಸಜ್ಜಾಗಿವೆ.

ಬಿ​ಪೊ​ರ್‌​ಜೊ​ಯ್‌’ ತನ್ನ ಪಥ ಬದಲಿಸಿ ಈಶಾನ್ಯಕ್ಕೆ ಕಚ್ ಮತ್ತು ಸೌರಾಷ್ಟ್ರ ಕಡೆಗೆ ಚಲಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಇದು ಅತ್ಯಂತ ತೀವ್ರವಾದ ಚಂಡಮಾರುತವಾಗಿದ್ದು, ಭೂಕುಸಿತವನ್ನು ಉಂಟು ಮಾಡುವ ನಿರೀಕ್ಷೆಯಿದೆ. ಗಂಟೆಗೆ 125-135 ಕಿಮೀ ಮತ್ತು 145 ಕಿಮೀ ವರೆಗೆ ಗಾಳಿ ಬೀಸುತ್ತದೆ. ಹೀಗಾಗಿ ಗುಜರಾತ್ ಸರ್ಕಾರವು ಕಚ್ ಪ್ರದೇಶದ ಮೇಲೆ ಗಮನ ಕೇಂದ್ರಿಕರಿಸಿದೆ.

ರಾಜ್ಯ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ಈ ಬಗ್ಗೆ ಮಾತನಾಡಿದ್ದು “ ಚಂಡಮಾರುತವು ಪ್ರಸ್ತುತ ಕಚ್‍ನಿಂದ ಸುಮಾರು 290 ಕಿಮೀ ದೂರದಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ , ನಾವು ಈಗಾಗಲೇ ಕರಾವಳಿಯಲ್ಲಿ ವಾಸಿಸುವ ಸುಮಾರು 50000 ಜನರನ್ನು ಸ್ಥಳಾಂತರಿಸಿದ್ದೇವೆ. ಪ್ರದೇಶಗಳನ್ನು ತಾತ್ಕಾಲಿಕ ಆಶ್ರಮಕ್ಕೆ ಸ್ಥಳಾಂತರಿಸಿರುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ. ಮತ್ತು ಉಳಿದ 5000 ವ್ಯಕ್ತಿಯನ್ನು ತಡರಾತ್ರಿಯ ವೇಳೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.