ಇದು ನಾಚಿಕೆಗೇಡು – ಬೆಂಗಳೂರಿನ ಹದಗೆಟ್ಟ ರಸ್ತೆ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಟ್ವೀಟ್.

61
firstsuddi

ಬೆಂಗಳೂರು : ರಾಜಧಾನಿ ಬೆಂಗಳೂರಿನ ಹದಗೆಟ್ಟ ರಸ್ತೆಗಳ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಇದೀಗ ಅದೇ ವಿಚಾರವನ್ನಿಟ್ಟುಕೊಂಡು ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು-ಮೈಸೂರು ನಡುವಿನ ರಸ್ತೆಯ ನೈಸ್ ರಸ್ತೆ ಜಂಕ್ಷನ್ ಸಮೀಪದಲ್ಲಿ ಹತ್ತಾರು ಗುಂಡಿಗಳು ಕಾಣಿಸಿ ಕೊಂಡಿರುವ ವಿಡಿಯೋ ತುಣುಕನ್ನು ಶ್ರೀರಾಮ್ ಬಿ ಎನ್ ಎನ್ನುವವರು ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಕಿರಣ್ ಮಜುಂದಾರ್ ಷಾ, ‘ಇದು ಆಘಾತಕಾರಿ ಮತ್ತು ನಾಚಿಕೆಗೇಡು’ ಎಂದು ಕಿಡಿ ಕಾರಿದ್ದಾರೆ.

ಈ ಹಿಂದೆ ಟ್ವೀಟ್ ಮಾಡಿ ಛೀಮಾರಿ ಹಾಕಿದ್ದ ಕಿರಣ್ : ಕೆಟ್ಟ ರಸ್ತೆ ಬಗ್ಗೆ ಆಕ್ರೋಶ ಹೊರಹಾಕಿರುವ ಬಯೋಕಾನ್ ಮುಖ್ಯಸ್ಥೆ, ಒಳ್ಳೆಯ ರಸ್ತೆ ಸೌಕರ್ಯ ಒದಗಿಸದ ಸ್ಥಳೀಯ ರಾಜಕಾರಣಿಗಳಿಗೆ ನಾಚಿಕೆಯಾಗಬೇಕೆಂದು ಟ್ವೀಟ್ ನಲ್ಲಿ ಆನೇಕಲ್ ತಾಲೂಕಿಗೆ ಸಂಬಂಧ ಪಟ್ಟ ಶಾಸಕ, ಸಂಸದರು ಮತ್ತು ಪಂಚಾಯಿತಿ ಮಟ್ಟದ ರಾಜಕಾರಣಿಗಳಿಗೆ ಚಾಟಿ ಬೀಸಿದ್ದರು.

ಆನೇಕಲ್ ತಾಲೂಕಿನ ಹುಸೂರು-ಸರ್ಜಾಪುರ ರಸ್ತೆ ಸಂಚಾರ ಮಾಡದಿರುವಷ್ಟು ಹದಗೆಟ್ಟಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಉತ್ತಮ ರಸ್ತೆ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ ಸರ್ಕಾರ ಬಸ್ ಡಿಪೋ, ವಸತಿ ಗೃಹಗಳನ್ನು ಇಲ್ಲಿ ಯಾಕೆ ನಿರ್ಮಿಸಬೇಕಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದರು.