ಬೆಂಗಳೂರು : ಇದೇ ಮೊದಲ ಬಾರಿಗೆ ವಿವಾದಿತ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಇಂದು ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಬೆಂಗಳೂರು ನಗರ ಉತ್ತರ ವಿಭಾಗ ಉಪವಿಭಾಗಧಿಕಾರಿ ಶಿವಣ್ಣ ಧ್ವಜಾರೋಹಣ ನೇರವೇರಿಸಿದರು. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
75ನೇ ಅಮೃತ ಸ್ವಾತಂತ್ರ್ಯ ಮಹೋತ್ಸವ ವೇಳೆ ಯಾವುದೇ ಅಹಿತಕರ ಘಟನೆಯಾಗದಂತೆ ಸಾಕಷ್ಟು ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿತ್ತು. ನಿನ್ನೆ ಸಂಜೆ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜಿಪಿ ಪ್ರವೀಣ್ ಸೂದ್ ಸ್ಥಳಕ್ಕೆ ಆಗಮಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ಪರಿಶೀಲಿಸಿದ್ದರು. ಇದರಂತೆ ಮೈದಾನದ ಸುತ್ತ ಪೊಲೀಸರ ಸರ್ಪಗಾವಲಿತ್ತು. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಡಿಸಿಪಿ ಸೇರಿದಂತೆ ಸೇರಿ ಸುಮಾರು 600ಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜನೆಯಾಗಿದ್ದರು.
ಶಾಸಕ ಜಮೀರ್ ಮಾತನಾಡಿ, ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿರೋದು ನನಗೆ ಖುಷಿ ತಂದಿದೆ. ಎರಡು ತಿಂಗಳ ಹಿಂದೆಯೇ ಸ್ವಾತಂತ್ರ್ಯ ಆಚರಣೆ ಬಗ್ಗೆ ಹೇಳಿದ್ದೆ. ಇನ್ಮುಂದೆ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಧಾರ್ಮಿಕ ಹಬ್ಬದ ಬಗ್ಗೆ ಸರ್ಕಾರ ಚಿಂತನೆ ಮಾಡಲಿದೆ. ನಾನು ನಿರ್ಧಾರ ಮಾಡಕ್ಕಾಗಲ್ಲ. ಇದು ಈಗ ಸರ್ಕಾರದ ಆಸ್ತಿ ಎಂದರು.










