ಇನ್ಶೂರೆನ್ಸ್ ಹಣಕ್ಕಾಗಿ ಸ್ನೇಹಿತರ ಜೊತೆಗೂಡಿ ಅಣ್ಣನನ್ನೇ ಕೊಂದ ತಮ್ಮ.

41

ಬೆಳಗಾವಿ: 50 ಲಕ್ಷ ರೂ. ಇನ್ಶೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಬಳಿ ನಡೆದಿದೆ. ಪ್ರಕರಣದ ಬಳಿಕ ಊರು ಬಿಟ್ಟಿದ್ದ ಆರೋಪಿಗಳು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹನುಮಂತ ಗೋಪಾಲ ತಳವಾರ (35) ಕೊಲೆಯಾದ ವ್ಯಕ್ತಿ. ಬಸವರಾಜ ತಳವಾರ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಅಣ್ಣನ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಹನುಮಂತ ತನ್ನ ಹೆಸರಲ್ಲಿ ಬಸವರಾಜ 50 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ, ಅಲ್ಲದೇ ಆ ಇನ್ಶೂರೆನ್ಸ್‍ಗೆ ನಾಮಿನಿ ಕೂಡ ತಾನೇ ಆಗಿದ್ದ. ಅಣ್ಣ ಸತ್ತರೆ ತನಗೆ ಲಾಭ ಎಂದು ಭಾವಿಸಿ ಆತನನ್ನೇ ಹತ್ಯೆ ಮಾಡಲು ಬಸವರಾಜ ಸಂಚು ರೂಪಿಸಿದ್ದ. ಅಕ್ಟೋಬರ್ 7 ರಂದು ಕಂಠಪೂರ್ತಿ ಕುಡಿಸಿ ತನ್ನ ಗ್ಯಾಂಗ್‍ನೊಂದಿಗೆ ಅಣ್ಣನನ್ನು ಶ್ರೀಗಂಧದ ಕಟ್ಟಿಗೆಗಳಿವೆ, ಅದನ್ನು ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ಹಣಮಂತನ ತಲೆಗೆ ರಾಡ್‍ನಿಂದ ಹೊಡೆದು ಆರೋಪಿಗಳು ಕೊಲೆ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಬಳಿಕ ಕಬ್ಬಿನ ಹೊಲದಲ್ಲಿ ಹನುಮಂತನ ಶವ ಪತ್ತೆಯಾಗಿತ್ತು. ಹನುಮಂತನ ಶವ ಸಿಗುತ್ತಿದ್ದಂತೆ, ಆರೋಪಿಗಳು ಊರಿನಿಂದ ಪರಾರಿಯಾಗಿದ್ದರು. ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಘಟಪ್ರಭಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತ ಹನುಮಂತನ ಸಹೋದರ ಬಸವರಾಜ್ ತಳವಾರ, ಆತನ ಸ್ನೇಹಿತರಾದ ಬಾಪು ಶೇಖ್, ಈರಪ್ಪ ಹಡಗಿನಾಳ ಹಾಗೂ ಸಚಿನ್ ಕಂಟೆನ್ನವರ್ ಎಂಬ ಆರೋಪಿಗಳನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.