ಇರಾನ್‌ನಲ್ಲಿ ಬೆಚ್ಚಿ ಬೀಳಿಸುವ ಘಟನೆ – ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪತಿ!

85
firstsuddi

ಟೆಹರಾನ್ : ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ಆಕೆಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ್ದು, ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ.

ಇರಾನ್ ನ ನೈರುತ್ಯ ಭಾಗದ ನಗರ ಅಹ್ವಾಜ್ ಎಂಬಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಮೋನಾ ಹೈದರಿ (17) ಎಂದು ಗುರುತಿಸಲಾಗಿದೆ. ಈಕೆಯ ಪತಿ ಮತ್ತು ಸೋದರ ಮಾವ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಇರಾನ್ ನ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತನಗೆ ದ್ರೋಹ ಎಸಗಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶೀಲ ಶಂಕಿಸಿದ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಅತ್ಯಂತ ಘೋರ ರೀತಿಯಲ್ಲಿ ಕೊಂದು ಆಕೆಯ ಶಿರವನ್ನು ಕತ್ತರಿಸಿ ಬೀದಿಯಲ್ಲಿ ಹಿಡಿದು ಪ್ರದರ್ಶಿಸಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಇರಾನ್ ನಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದೆ. ಮಹಿಳಾ ವ್ಯವಹಾರಗಳ ಉಪಾಧ್ಯಕ್ಷೆ ಎನ್ಸೀಹ್ ಖಜಾಲಿ ಅವರು ಸಂಸತ್ತಿನಲ್ಲಿ ಪ್ರಕರಣ ಸಂಬಂಧ ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ಅಂತಹ ಪ್ರಕರಣಗಳನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇರಾನ್ ಮಾಧ್ಯಮಗಳ ಪ್ರಕಾರ ಮೋನಿ ಹೈದರಿ 12 ವರ್ಷವಿದ್ದಾಗಲೇ ವಿವಾಹವಾಗಿದ್ದು, ಮೂರು ವರ್ಷದ ಮಗ ಆಕೆಗಿದ್ದಾನೆ. ಇರಾನ್ ನಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳನ್ನು ತಡೆಯಲು ಮದುವೆಗೆ ಕಾನೂನಿನ ವಯಸ್ಸನ್ನು 13ಕ್ಕೆ ನಿಗದಿ ಮಾಡಲಾಗಿದೆ.