ಚಿತ್ರದುರ್ಗ : ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ನಡೆದಿದೆ.
ನಂದನಹೊಸೂರು ಗ್ರಾಮದ ನಿವಾಸಿ ಗಿರೀಶ್(18), ಹೊರಕೆರೆದೇವರಪುರ ಗ್ರಾಮದ ಸಂಜಯ್(18), ಕಣಿವೆ ಜೋಗಿಹಳ್ಳಿ ಗ್ರಾಮದ ಮನು(19) ಮೃತರು. ಮೂವರು ವಿದ್ಯಾರ್ಥಿಗಳು ಪಿಯುಸಿ ಓದುತ್ತಿದ್ದರು.
ಸಂಜೆ ಗ್ರಾಮದ ಹೊರವಲಯದಲ್ಲಿರುವ ಗುಂಡಿಕೆರೆಯಲ್ಲಿ ಗಿರೀಶ್, ಸಂಜಯ್ ಹಾಗೂ ಮನು ಈಜಲು ತೆರಳಿದ್ರು. ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಕೆರೆಗೆ ಹೋಗಿ ನೋಡಿದಾಗ ಶವ ಪತ್ತೆಯಾಗಿದೆ.
ಮೂವರಲ್ಲಿ ಓರ್ವನಿಗೆ ಈಜು ಬರುತ್ತಿದ್ದು, ಇನ್ನಿಬ್ಬರು ಈಜಲು ಬರುತ್ತಿರಲಿಲ್ಲ. ಆಳದ ಜಾಗದಲ್ಲಿ ಸಿಲುಕಿ ಮೂವರು ನೀರುಪಾಲಾದ ಶಂಕೆ ವ್ಯಕ್ತಪಡಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










