ಈ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ, ಸುಖಾಸುಮ್ಮನೆ ನನ್ನನ್ನು ಸಿಲುಕಿಸಲಾಗಿದೆ : ನರೇಶ್ ಗೌಡ.

134
Firstsuddi

ಬೆಂಗಳೂರು : ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾಗಿರುವ ನರೇಶ್ ಗೌಡ ಅವರು ಅಜ್ಞಾತ ಸ್ಥಳದಿಂದ ವೀಡಿಯೋಂದನ್ನು ಮಾಡಿ ಕಳುಹಿಸಿದ್ದಾರೆ. ಈ ವೀಡಿಯೋ ಮೂಲಕ ಅವರು, ಈ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ, ಸುಖಾಸುಮ್ಮನೆ ನನ್ನನ್ನು ಸಿಲುಕಿಸಲಾಗಿದೆ ಎಂದು ತಿಳಿಸಿದ್ದಾರೆ.

ನನಗೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಈ ಕೇಸ್ಗೂತ ನನಗೂ ಯಾವುದೇ ಸಂಬಂಧ ಇಲ್ಲ. ಖಾಸಗಿ ಮಾಧ್ಯಮದಲ್ಲಿ ಉದ್ಯೋಗದಲ್ಲಿದ್ದಾಗ ನಾನು ಈ ಹಿಂದೆ ಬಹಳ ಸ್ಟಿಂಗ್‌ ಆಪರೇಷನ್‌ ಮಾಡಿದ್ದೇನೆ. ನನ್ನ ಬಗ್ಗೆ ಯಾವುದೇ ಆರೋಪ ಬಂದಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಏಕೆ ಬಂದಿದೆ ಅನ್ನುವುದು ಗೊತ್ತಾಗುತ್ತಿಲ್ಲ.

ನಾನು ಪತ್ರಕರ್ತನಾಗಿರುವ ಕಾರಣ ಯುವತಿ 4-5 ತಿಂಗಳ ಹಿಂದೆ ನನ್ನನ್ನು ಸಂಪರ್ಕಿಸಿ ರಮೇಶ್‌ ಜಾರಕಿಹೊಳಿ ಅವರಿಂದ ನನಗೆ ಅನ್ಯಾಯವಾಗಿದೆ. ನ್ಯಾಯಕೊಡಿಸಬೇಕು ಎಂದು ಕೇಳಿದ್ದರು. ದಾಖಲೆ, ಫೋಟೋ, ಕ್ಲಿಪ್ಪಿಂಗ್ ಏನಾದರೂ ಇದೆಯಾ ಎಂದು ಕೇಳಿದ್ದೆ. ಈ ನಡುವೆ ನನ್ನ ತಾಯಿಗೆ ತಾಯಿಗೆ ಹುಷಾರಿರಲಿಲ್ಲ, ನನ್ನ ಮಗಳ ನಾಮಕರಣ ಇತ್ತು. ಹೀಗಾಗಿ ಆಕೆಗೆ ನ್ಯಾಯ ಕೊಡಿಸಲು ಆಗಲಿಲ್ಲ. 15-20 ಬಾರಿ ಆ ಹುಡುಗಿ ಜೊತೆ ಮಾತನಾಡಿದ್ದೇನೆ. ನನ್ನ ಮಗಳ ನಾಮಕರಣ ಕೂಡ ಇತ್ತು. ನನ್ನನ್ನು ಕರೆಯಲ್ವಾ ಅಂದಿದ್ದರೂ, ಆ ಹುಡುಗಿ ಕೂಡ ನಾಮಕರಣಕ್ಕೆ ಬಂದರು ಹೋದರು. ಈ ಪ್ರಕರಣದಲ್ಲಿ ನಾನೇ ದೊಡ್ಡ ಸೂತ್ರಧಾರಿ ಅನ್ನೋ ರೀತಿ ಬಿಂಬಿಸೋಕೆ ಆರಂಭ ಮಾಡಿದ್ದಾರೆ ಎಂದರು.

ಯಾವುದೇ ರಾಜಕೀಯ ನಾಯಕರಿಂದ 5 ಕೋಟಿಯಲ್ಲ, 5 ರೂಪಾಯಿ ಹಣವನ್ನೂ ಪಡೆದುಕೊಂಡಿಲ್ಲ. ನಾನು ಮಾಡಿರುವ 3 ಲಕ್ಷ ಸಾಲ ತೀರಿಸೋಕೆ ನನಗೆ ಆಗುತ್ತಿಲ್ಲ, ಎರಡೆರಡು ಬಾರಿ ಚೆಕ್ ಬೌನ್ಸ್ ಆಗಿದೆ. ಕ್ರೆಡಿಟ್ ಕಾರ್ಡ್, ಇಎಂಐ ಕಟ್ಟಲು ಆಗದೇ ಇಂಟ್ರೆಸ್ಟ್‌ ಕಟ್ಟುತ್ತಿದ್ದೇನೆ. ಶಿರಾ ತಾಲ್ಲೂಕು ಭುವನಹಳ್ಳಿ ನನ್ನ ಹುಟ್ಟೂರು. ವರ್ಷಕ್ಕೊಂದು ಸರಿ ಮಳೆ ಬಂದರೆ ನನ್ನ ಮನೆ ಸೋರುತ್ತದೆ. 100 ಕೋಟಿ ಆರೋಪ ಮಾಡುತ್ತಿರಲ್ಲ, ತಂದು ಕೊಡಿ, ನಾನೇ ಆರೋಪಿ ಎಂದು ಒಪ್ಪಿಕೊಳ್ಳುತ್ತೇನೆ.

ನಾನು ಏಕೆ ತನಿಖಾಧಿಕಾರಿ ಮುಂದೆ ಬಂದಿಲ್ಲ ಅಂದರೆ, ಏನ್ ಪ್ಲಾನ್ ನಡೆದಿದೆ ಅನ್ನೋದು ನನಗೆ ಗೊತ್ತು. ಅದಕ್ಕೆ ನಾನು ಬಂದಿಲ್ಲ. ಇನ್ನು 5ರಿಂದ 7 ದಿನಗಳೊಳಗಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ನನಗೆ ಗೊತ್ತಿರುವ ಎಲ್ಲಾ ಮಾಹಿತಿಗಳನ್ನು ನೀಡಿ ನಿರ್ದೋಷಿಯಾಗಿ ಹೊರ ಬರುತ್ತೇನೆ. ರಮೇಶ್ ಜಾರಕಿಹೊಳಿ ನಿರಪರಾಧಿ ಎಂದು ಬಿಂಬಿಸಲಾಗುತ್ತಿದೆ. ಹೆಣ್ಣು ಮಗಳನ್ನು ಅಪರಾಧಿ ಥರ ಬಿಂಬಿಸಲಾಗುತ್ತಿದೆ. ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ನಾಡ ದ್ರೋಹಿ ರಮೇಶ್ ಜಾರಕಿಹೊಳಿ. ಆ ಹುಡುಗಿ ಪರ ನಿಲ್ಲೋದು ನಮ್ಮ ಧರ್ಮ. ರಮೇಶ್ ಜಾರಕಿಹೊಳಿ ಪ್ರಭಾವ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ. ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ನಡೆಯುತ್ತಿದೆ. ಸಿಡಿ ಹೇಗಾಯ್ತು, ಸಿಡಿ ಹೇಗೆ ಆಚೆ ಬಂತು ಅನ್ನೋದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ಎಳ್ಳಷ್ಟು ಪಾತ್ರವಿಲ್ಲ. ನನಗೆ ಏನು ಮಾಹಿತಿ ಇದೆ ಕೊಡುತ್ತೇನೆ. ನಾನು ನಿರ್ದೋಷಿ ಅನ್ನೋದು ತನಿಖೆಯಿಂದ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.