ಈ ಬಾರಿಯೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಗೋಲ್ಡನ್ ಸ್ಟಾರ್ ಗಣೇಶ್.

82
firstsuddi

ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬ. ಇವರ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಆದರೆ, ಈ ಬಾರಿಯೂ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಮತ್ತು ಅಭಿಮಾನಿಗಳಿಗೆ ತಾವು ಸಿಗುವುದಿಲ್ಲವೆಂದು ಗಣೇಶ್ ತಿಳಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಗಣೇಶ್, ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಹೆಜ್ಜೆ ಹಾಕಿ, ನನ್ನ ಯಶಸ್ಸನ್ನು ನಿಮ್ಮದೇ ಯಶಸ್ಸು ಎನ್ನುವಂತೆ ಸಂಭ್ರಮಿಸಿ ನೀವೆಲ್ಲರೂ ಖುಷಿ ಪಟ್ಟಿದ್ದೀರಿ. ಪ್ರತಿ ವರ್ಷವೂ ನನ್ನ ಹುಟ್ಟಿದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತೀವ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಿಸಿದ್ದೀರಿ. ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯು ಹಂಬಲ ನನಗೂ ಇದೆ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಸಮಯ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ಅನಿವಾರ್ಯ ಕಾರಣಗಳಿಂದಾಗಿ ನಾನು ಹುಟ್ಟಿದ ದಿನದಂದು ಅಂದರೆ ಜುಲೈ 2 ರಂದು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲರ ಕ್ಷಮೆ ಕೋರುತ್ತೇನೆ.

ನೀವೆಲ್ಲರೂ ಅಭಿಮಾನದಿಂದ ಪ್ರತಿ ಬಾರಿ ನನಗಾಗಿ ತರುವ ಹಾರ, ತುರಾಯಿ, ಕೇಕ್ ಇತ್ಯಾದಿಗಳ ಬದಲಿಗೆ ಅಗತ್ಯ ಇರುವವರಿಗೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನನಗೆ ತಲುಪಿಸಿಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.