ಈ ರೀತಿಯಲ್ಲಿ ನೆಲ್ಲಿಕಾಯಿ ಸೇವನೆ ಮಾಡಿದರೆ ನಿಮಗೆ ಸಿಗಲಿದೆ ಅತ್ಯಧಿಕ ಆರೋಗ್ಯ ಲಾಭಗಳು.

64

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸೇರಿದಂತೆ ವಿವಿಧ ಪೋಷಕಾಂಶಗಳು ಸಮೃದ್ಧವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಬೆಟ್ಟದ ನೆಲ್ಲಿಕಾಯಿಯ ರುಚಿಯನ್ನು ಬಲ್ಲದವರು ಯಾರೂ ಇಲ್ಲ. ಆರ್ಯುವೇದ ವಿಜ್ಞಾನದಲ್ಲಂತೂ ನೆಲ್ಲಿಕಾಯಿಗೆ ಬಹಳ ಮಹತ್ವವಿದೆ. ಶತ ಶತಮಾನಗಳಿಂದಲೂ ನೆಲ್ಲಿಕಾಯಿಗಳನ್ನು ಔಷಧಿಯ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡಂಟ್ ಗುಣಗಳು ಮತ್ತು ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ , ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಶಾ ಫೌಂಡೇಶನ್‍ನ ಸಂಸ್ಥಾಪಕರಾದ ಯೋಗಿ ಸದ್ಗುರು, ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಪಡೆಯಲು ನೆಲ್ಲಿಕಾಯಿಯನ್ನು ಯಾವ ಹೊತ್ತಿನಲ್ಲಿ ಹಾಗೂ ಯಾವ ರೀತಿಯಲ್ಲಿ ಸೇವನೆ ಮಾಡುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.

ನೆಲ್ಲಿಕಾಯಿಯಲ್ಲಿ ಅಡಗಿರುವ ಪ್ರಯೋಜನಗಳು.
 ನೆಲ್ಲಿಕಾಯಿಯು ಹೆಚ್ಚಾಗಿ ವಿಟಮಿನ್ ಸಿ ಅಂಶವನ್ನು ಹೊಂದಿದ್ದು ವಿಟಮಿನ್ ಸಿಯ ಶ್ರೀಮಂತ ಮೂಲವೆಂದು ಗುರುತಿಸಿಕೊಂಡಿದೆ. ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆಲ್ಲಿಕಾಯಿ ಪಾತ್ರ ಮಹತ್ವದ್ದು.
 ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ಸಾಮಥ್ರ್ಯ ಕೂಡ ನೆಲ್ಲಿಕಾಯಿಗೆ ಇರುತ್ತದೆ. ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ . ಆದರೆ ನೆಲ್ಲಿಕಾಯಿಯಿಂದ ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಪಡೆದುಕೊಳ್ಳಲು ನಾವು ನೆಲ್ಲಿಕಾಯಿಯನ್ನು ಖಾಲಿ ಹೊಟ್ಟೆಯಲ್ಲಿಯೇ ಸೇವನೆ ಮಾಡಬೇಕು.
 ಸದ್ಗುರುಗಳು ಹೇಳುವ ಪ್ರಕಾರ, ನೆಲ್ಲಿಕಾಯಿಯ ಸಂಪೂರ್ಣ ಆರೋಗ್ಯ ಲಾಭವನ್ನು ಪಡೆದುಕೊಳ್ಳಲು ನಾವು ಖಾಲಿ ಹೊಟ್ಟೆಯಲ್ಲಿಯೇ ಅದನ್ನು ಸೇವನೆ ಮಾಡಬೇಕು. ಆದರೆ ನೆಲ್ಲಿಕಾಯಿಯು ಎಲ್ಲಾ ಕಾಲದಲ್ಲಿಯೂ ಲಭ್ಯ ಇರುವುದಿಲ್ಲ. ಇಂಥಾ ಸಂದರ್ಭದಲ್ಲಿ ನೀವು ನೆಲ್ಲಿಕಾಯಿಯನ್ನು ಕತ್ತರಿಸಿ ಹೋಳು ಮಾಡಿ ಬಳಿಕ ಅದನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳುವ ಮೂಲಕ ನೀವು ನಿತ್ಯವೂ ನೆಲ್ಲಿಕಾಯಿಯನ್ನು ಸೇವನೆ ಮಾಡಬಹುದು.ಇದೇ ಪುಡಿಯಿಂದ ನೀವು ನೆಲ್ಲಿಕಾಯಿಯ ಜ್ಯೂಸ್ ತಯಾರಿಸಿ ಕೂಡ ಕುಡಿಯಬಹುದು.
 ತಾಜಾ ನೆಲ್ಲಿಕಾಯಿಯನ್ನು ನೀವು ಸೇವಿಸಬೇಕು ಎಂದುಕೊಂಡಿದ್ದರೆ ಮೊದಲು ಅದನ್ನು ಚೆನ್ನಾಗಿ ತೊಳೆದು ಹಸಿಯಾಗಿ ತಿನ್ನಿರಿ. ನೆಲ್ಲಿಕಾಯಿಯು ರುಚಿಯಲ್ಲಿ ಸಾಕಷ್ಟು ಕಟುವಾಗಿ ಇರುತ್ತದೆ. ನೆಲ್ಲಿಕಾಯಿಯ ರುಚಿಯನ್ನು ಇಷ್ಟಪಡುವವರು ನೀವಲ್ಲವಾಗಿದ್ದರೆ ನೀವು ನೆಲ್ಲಿಕಾಯಿಯನ್ನು ಹೋಳು ಮಾಡಿ ಆ ಹೋಳುಗಳನ್ನು ಜೇನುತುಪ್ಪದೊಂದಿಗೆ ಅದ್ದಿ ತಿನ್ನಬಹುದು. ಹುಳಿ – ಸಿಹಿ ರುಚಿಯ ಮಿಶ್ರಣವು ತಿನ್ನಲು ಮಜಾ ಕೊಡುತ್ತದೆ. ಅಲ್ಲದೇ ಜೇನುತುಪ್ಪ ಕೂಡ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದರಿಂದ ನಿಮ್ಮ ದೇಹಕ್ಕೆ ಹೆಚ್ಚುವರಿ ಲಾಭ ಸಿಗುತ್ತದೆ
ಎಷ್ಟು ಸೇವಿಸಬೇಕು..?:
ನೆಲ್ಲಿಕಾಯಿಯು ಅಗಾಧ ಪ್ರಮಾಣದಲ್ಲಿ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಸಹ ಮಿತವಾಗಿ ಸೇವನೆ ಮಾಡುವುದು ಕೂಡ ಮುಖ್ಯ. ಪ್ರತಿದಿನ ಒಂದು ತಾಜಾ ನೆಲ್ಲಿಕಾಯಿ ಸೇವನೆ ಸಾಕಾಗುತ್ತದೆ. ನೆಲ್ಲಿಕಾಯಿ ಪುಡಿ ಎಂದರೆ ನೀವು ಒಂದರಿಂದ ಎರಡು ಚಮಚ ಮಾತ್ರ ಸೇವನೆ ಮಾಡಬಹುದು. ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಶೇಖರಣೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.