ಉತ್ತಮ ಗುಣಮಟ್ಟದ ಶಿಕ್ಷಣ ಪ್ರತಿ ವಿದ್ಯಾರ್ಥಿಗಳಿಗೂ ಸಿಗಬೇಕು : ಎಸ್.ಆರ್ ಮಂಜುನಾಥ್.

100
firstsuddi

ಚಿಕ್ಕಮಗಳೂರು : ಅಲ್ಲಂಪುರ ಗ್ರಾಮದ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಗ್ಗೆ 11:00 ಗಂಟೆಗೆ ಸ್ಮಾರ್ಟ್‍ಕ್ಲಾಸ್ ಉದ್ಘಾಟನೆಯನ್ನು ಚಿಕ್ಕಮಗಳೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಸ್.ಆರ್ ಮಂಜುನಾಥ್‍ರವರು ನೆರವೇರಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಉತ್ತಮ ಗುಣಮಟ್ಟದ ಶಿಕ್ಷಣ ಪ್ರತಿ ವಿದ್ಯಾರ್ಥಿಗಳಿಗೂ ಸಿಗಬೇಕು ಇದಕ್ಕೆ ತಾಂತ್ರಿಕ ಸ್ಪರ್ಷ ಸಹಕಾರಿಯಾಗಲಿದೆ ಎಂದರು, ಈ ಶಾಲೆಯಲ್ಲಿ ತಾಂತ್ರಿಕ ಬೋಧನೆಯ ಮೂಲಕ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.

ಡಯಟ್‍ನ ಉಪನ್ಯಾಸಕರಾದ ಶ್ರೀ ಪ್ರಶಾಂತ್ ಜಿ ಆರ್ ಸ್ಮಾರ್ಟ್ ಮಾತನಾಡಿ 2022-23 ನೇ ಸಾಲಿನಿಂದ ಶಾಲೆಯಲ್ಲಿ ಎಲ್‍ಕೆಜಿ-ಯುಕೆಜಿ ಪ್ರಾರಂಭ ಮಾಡುವುದರ ಬಗ್ಗೆ ಚರ್ಚಿಸಿ, ಈ ಶೈಕ್ಷಣಿಕ ವರ್ಷದಿಂದ 1ನೇ ತರಗತಿಯಿಂದ ಆರಂಭವಾಗಿರುವ ಇಂಗ್ಲೀಷ್ ಮಾಧ್ಯಮದ ತರಗತಿಗಳು ನಡೆಯುತ್ತಿರುವ ಬಗ್ಗೆ ಹೆಚ್ಚು ಪ್ರಚಾರ ಮಾಡಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸಲು ಸಲಹೆ ನೀಡಿದರು.

ಈ ಶುಭ ಸಂದರ್ಭದಲ್ಲಿ ಅಲ್ಲಂಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ವಸಂತಕುಮಾರ್ ಎ ವಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀ ರಮೇಶ್ ಎ ಟಿ, ಶ್ರೀ ಮಧುಸೂದನ್‍ರಾವ್ ಎ ಹೆಚ್, ಪಿಡಿಒರಾದ ಶ್ರೀಮತಿ ಸುರಯ್ಯ ಬಾನು ಹಾಗೂ ಮಾನ್ಯಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಜಯರಾಮ ಬಿ ಎಸ್, ಹಾಗೂ ಶಾಲೆಯಎಸ್ ಡಿ ಎಂ ಸಿ , ಶಿಕ್ಷಕ ವೃಂದ , ವಿದ್ಯಾರ್ಥಿವೃಂದ ಹಾಜರಿದ್ದರು.