ಉಕ್ರೇನ್‍ನಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮಾಡಲು ಅವಕಾಶ : ಎನ್ಎಂಸಿ.

75
firstsuddi

ನವದೆಹಲಿ : ಉಕ್ರೇನ್‍ನಿಂದ ಭಾರತಕ್ಕೆ ಬಂದಿರುವ ವಿದೇಶಿ ವೈದ್ಯಕೀಯ ಪದವೀಧರರು ಭಾರತದಲ್ಲೇ ಇಂಟರ್ನ್‌ಶಿಪ್ ಮಾಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಅವಕಾಶ ನೀಡಿದೆ.

ಕೊವಿಡ್ 19 ಪರಿಸ್ಥಿತಿ, ಯುದ್ಧಗಳಂಥ ಕಾರಣದಿಂದ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಸಾಧ್ಯವಾಗದೇ ಇರುವ ಕೆಲವು ವಿದೇಶಿ ವೈದ್ಯಕೀಯ ಪದವೀದರರು ಇದ್ದಾರೆ. ಹೀಗಾಗಿ ಅವರು ತಮ್ಮ ಇಂಟರ್ನ್‌ಶಿಪ್ ಪೂರ್ತಿ ಮುಗಿಸಲು ಭಾರತದಲ್ಲಿ ಅವಕಾಶ ನೀಡಲಾಗುವುದು. ಅವರ ಅರ್ಜಿಯನ್ನು ಅರ್ಹ ಎಂದು ಪರಿಗಣಿಸಲಾಗುವುದು ಎಂದು ಎನ್ಎಂಸಿ ಹೇಳಿದೆ.

ಇಂಟರ್ನ್‌ಶಿಪ್ ಗೆ ಭಾರತದಲ್ಲಿ ನೋಂದಣಿ ಬಯಸುವ ವಿದ್ಯಾರ್ಥಿಗಳು ನ್ಯಾಶನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್ ನಡೆಸುವ ವಿದೇಶಿ ಮೆಡಿಕಲ್ ಗ್ರಾಜ್ಯುಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರಾ ಎಂಬುದನ್ನು ರಾಜ್ಯ ಮೆಡಿಕಲ್ ಕೌನ್ಸಿಲ್ ಗಳು ಖಚಿತಪಡಿಸಿಕೊಳ್ಳಬೇಕು. ಅಭ್ಯರ್ಥಿಯು ಎಲ್ಲಾ ಮಾನದಂಡಗಳನ್ನು ಪೂರ್ಣಗೊಳಿಸಿದ್ದರೆ 12 ತಿಂಗಳ ಇಂಟರ್ನ್‌ಶಿಪ್ ಅಥವಾ ಉಳಿದ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು.ಅಲ್ಲದೇ, ಇಂಟರ್ನ್‌ಶಿಪ್ ಪಡೆಯುವ ಕಾಲೇಜು ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆದಿಲ್ಲ/ಪಡೆಯುವುದಿಲ್ಲ ಎಂಬುದಕ್ಕೆ ರಾಜ್ಯ ಮೆಡಿಕಲ್ ಕೌನ್ಸಿಲ್ ಗಳು ಆ ಕಾಲೇಜುಗಳಿಂದ ಭರವಸೆ ಪಡೆಯಬೇಕು ಎಂದು ಎನ್ಎಂಸಿ ತಿಳಿಸಿದೆ.