ಲಕ್ನೋ : ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. 1985ರ ನಂತರ ಯಾವುದೇ ಪಕ್ಷ ಸತತ ಎರಡು ಬಾರಿ ಉತ್ತರ ಪ್ರದೇಶವನ್ನು ಆಳಿಲ್ಲ. ಆದರೆ ಈ ಬಾರಿ ಮೊದಲ ಸಲ ಬಿಜೆಪಿ ಸತತ ಎರಡು ಚುನಾವಣೆಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಯುಪಿ ಇಲ್ಲಿಯವರೆಗೆ ಸುಮಾರು 70 ವರ್ಷಗಳಲ್ಲಿ 21 ಸಿಎಂಗಳನ್ನು ಕಂಡಿದೆ. ಆದರೆ ಕೇವಲ ಮೂವರು ಮಾತ್ರ ಐದು ವರ್ಷಗಳ ಸಂಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಧಿನಾಯಕಿ ಮಾಯಾವತಿ 2007-2012ರಲ್ಲಿ ಮೊದಲ ಬಾರಿಗೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ 2012-2017ರ ಅವಧಿಯಲ್ಲಿ ಅಧಿಕಾರ ಪೂರ್ಣಗೊಳಿಸಿದ್ದರು. ಇದಾದ ಬಳಿಕ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರ ಪೂರೈಕೆ ಮಾಡಿರುವ 3ನೇ ಸಿಎಂ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ 37 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಪಕ್ಷವನ್ನ ಅಧಿಕಾರಕ್ಕೆ ತರುವಲ್ಲಿ ಯೋಗಿ ಆದಿತ್ಯನಾಥ್ ಯಶಸ್ವಿಯಾಗಿದ್ದಾರೆ.
ಕಳೆದ 29 ವರ್ಷಗಳಿಂದ ಉತ್ತರ ಪ್ರದೇಶದ ನೋಯ್ಡಾಗೆ ಯಾವುದೇ ಸಿಎಂ ಭೇಟಿ ನೀಡಿರಲಿಲ್ಲ. ನೊಯ್ಡಾಗೆ ಭೇಟಿಗೆ ನೀಡಿದ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಉತ್ತರ ಪ್ರದೇಶದ ರಾಜಕೀಯದಲ್ಲಿದೆ. ಈ ಕಾರಣಕ್ಕೆ ಹಿಂದೆ ಅಖಿಲೇಶ್ ಯಾದವ್ ಸೇರಿದಂತೆ ಹಲವು ಸಿಎಂಗಳು ನೊಯ್ಡಾಗೆ ತಮ್ಮ ಅಧಿಕಾರದ ಅವಧಿಯಲ್ಲಿ ಭೇಟಿ ನೀಡಿರಲಿಲ್ಲ. ಆದರೆ, 2018ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿಗೆ ಭೇಟಿ ನೀಡಿದ್ದರು. ಇದಾದ ಬಳಿಕ 2021ರಲ್ಲಿ ಮತ್ತೊಂದು ನೋಯ್ಡಾಗೆ ತೆರಳಿ ಕೋವಿಡ್ ಆಸ್ಪತ್ರೆ ಉದ್ಘಾಟನೆ ಮಾಡಿದ್ದರು. ತಮ್ಮ ಅಧಿಕಾರ ಅವಧಿಯಲ್ಲಿ ಯೋಗಿ ಸುಮಾರು 10ಕ್ಕೂ ಹೆಚ್ಚು ಸಲ ಇಲ್ಲಿಗೆ ಭೇಟಿ ನೀಡಿದ್ದಾರೆ.










