ಪಣಜಿ : ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಅವರು ಸೋಲನ್ನು ಅನುಭವಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಅಟಾನಾಸಿಯೊ ಮಾನ್ಸೆರೇಟ್ ಅವರು ಗೆಲುವಿನ ನಗೆ ಬೀರಿದ್ದಾರೆ. ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಮಾನ್ಸೆರೇಟ್ 6,787 ಮತಗಳನ್ನು ಪಡೆದಿದ್ದರೆ, ಉತ್ಪಲ್ ಪರಿಕ್ಕರ್ 6,071 ಮತಗಳನ್ನು ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಎಲ್ವಿಸ್ ಗೋಮ್ಸ್ ಅವರು 3175 ಮತಗಳನ್ನು ಪಡೆದಿದ್ದಾರೆ.
ಗೋವಾ ಚುನಾವಣೆ ಘೋಷಣೆಯಾದ ದಿನದಿಂದಲೂ ಉತ್ಪವ್ ಪರಿಕ್ಕರ್ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಣಜಿ ಕ್ಷೇತ್ರದಲ್ಲಿ ತನಗೆ ಟಿಕೆಟ್ ನೀಡದೇ ಮಾನ್ಸೆರೇಟ್ ಅವರನ್ನು ಕಣಕ್ಕಿಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಉತ್ಪಲ್ ಪರಿಕ್ಕರ್ ಅವರು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಇದೀಗ ಕೊನೆಗೂ ಪಣಜಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.










