ಎದೆಹಾಲು ಉಣಿಸುವ ವೇಳೆ ಹೆಣ್ಣುಮಗು ಆಕಸ್ಮಿಕ ಸಾವು- ಮಾನಸಿಕವಾಗಿ ನೊಂದ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ…

43
firstsuddi

ಕಡಬ (ದಕ್ಷಿಣ ಕನ್ನಡ): ಎದೆಹಾಲು ಉಣಿಸುವ ವೇಳೆ ತನ್ನ ಹೆಣ್ಣುಮಗು ಆಕಸ್ಮಿಕವಾಗಿ ಮೃತಪಟ್ಟ ಕಾರಣದಿಂದ ಮಾನಸಿಕವಾಗಿ ನೊಂದ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದಲ್ಲಿ ನಡೆದಿದೆ.

ಕಡಬ ತಾಲೂಕಿನ ರಾಮಕುಂಜ ಗ್ರಾಮದ ವನಿತಾ (38) ಆತ್ಮಹತ್ಯೆ ಮಾಡಿಕೊಂಡವರು. ವನಿತಾ ಅವರಿಗೆ ಮೂರು ವರ್ಷದ ಗಂಡು ಮಗು ಇದ್ದು, ಮೂರು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಎದೆಹಾಲು ಕೊಟ್ಟ ತಾಯಿ ವನಿತಾ ಅವರು ಮಗುವನ್ನು ತಕ್ಷಣ ಮಲಗಿಸಿದ ಕಾರಣ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಇದರಿಂದ ವನಿತಾ ಅವರು ಮಾನಸಿಕವಾಗಿ ನೊಂದುಕೊಂಡು ಖಿನ್ನತೆಗೊಳಗಾಗಿದ್ದರು. ಇದಕ್ಕೆ ಚಿಕಿತ್ಸೆ ಕೊಡಿಸುವ ಸಲುವಾಗಿ ಪತಿಯು, ವನಿತಾ ಅವರನ್ನು ತಾಯಿ ಮನೆಯಾದ ರಾಮಕುಂಜದಲ್ಲಿ ಬಿಟ್ಟು ಹೋಗಿದ್ದರು. ಏಪ್ರಿಲ್ 2ರಂದು ಮನೆಯವರೆಲ್ಲಾ ಹೊರಗೆ ಹೋಗಿದ್ದ ವೇಳೆ ಮನೆಯ ಕೋಣೆಯಲ್ಲಿ ಮರದ ಅಡ್ಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.