ಎಸ್‍ಐಟಿ ವಿಚಾರಣೆಗೆ ಮತ್ತೊಮ್ಮೆ ಹಾಜರಾಗಲಿರುವ ಯುವತಿ : ಇಂದೇ ಮೆಡಿಕಲ್ ಟೆಸ್ಟ್, ಸ್ಥಳ ಮಹಜರು…

103
firstsuddi

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಹಾಜರಾಗಿ ಸಿಆರ್ ಪಿಸಿ 164ರಡಿ ಹೇಳಿಕೆ ನೀಡಿದ್ದು, ಇಂದು ಹಾಜರಾಗುವಂತೆ ನೊಟೀಸ್ ಜಾರಿ ಮಾಡಿರುವ ಹಿನ್ನಲೆ ಯುವತಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎಸ್ಐಟಿ ಅಧಿಕಾರಿಗಳು ಎರಡು ಗಂಟೆಗಳ ಕಾಲ ಯುವತಿಯನ್ನು ವಿಚಾರಣೆಗೊಳಪಡಿಸಿದ್ದರು. ಈ ವೇಳೆ, ರಮೇಶ್ ಜಾರಕಿಹೊಳಿ ಅವರೊಂದಿಗೆ ಮಾತನಾಡಿದ ಮೊಬೈಲ್ ಕರೆಗಳ ಸಾಕ್ಷ್ಯವನ್ನು ಹಾಗೂ ಜಾರಕಿಹೊಳಿನೀಡಿದ್ದಾರೆ ಎನ್ನಲಾದ ಉಡುಗೊರೆಯನ್ನು ಯುವತಿ ನೀಡಿದ್ದಾಳೆ. ಕೊಡಿಗೇಹಳ್ಳಿಯಲ್ಲಿರುವ ವಕೀಲ ಜಗದೀಶ್ ಅವರ ಮನೆಯಲ್ಲಿ ಯುವತಿ ಇದ್ದಾಳೆ ಎನ್ನಲಾಗಿದ್ದು, ಅಲ್ಲಿಂದ ನೇರವಾಗಿ ಆಡುಗೋಡಿಯ ವಿಚಾರಣಾ ಕೇಂದ್ರಕ್ಕೆ ತೆರಳಲಿದ್ದಾಳೆ.

ಯುವತಿಯನ್ನು ಮೆಡಿಕಲ್ ಪರೀಕ್ಷೆಗೊಳಪಡಿಸಲು ತನಿಖಾಧಿಕಾರಿಗಳು ಸಿದ್ದತೆಯನ್ನು ಮಾಡಿಕೊಂಡಿದ್ದು, ವೈದ್ಯಕೀಯ ಟೆಸ್ಟ್ ಬಳಿಕ ಸಂತ್ರಸ್ತೆಯನ್ನು ವಿಚಾರಣೆಗೊಳಪಡಿಸಲಿದ್ದಾರೆ. ರಮೇಶ ಜಾರಕಿಹೊಳಿ ಅವರ ಸಂಪರ್ಕ ಹೇಗಾಯಿತು? ಯಾವಾಗ ಭೇಟಿಯಾಗಿದ್ದು, ಘಟನೆ ನಡೆದ ಸ್ಥಳ, ಇತ್ಯಾದಿ ಪ್ರಶ್ನೆಗಳನ್ನು ಯುವತಿಗೆ ಕೇಳಲು ತನಿಖಾಧಿಕಾರಿಗಳು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ರಮೇಶ್ ಜಾರಕಿಹೊಳಿಯವರು ನನಗೆ ಕೆಲಸ ಕೊಡಿಸುವುದಾಗಿ ಹೇಳಿ ನನ್ನನ್ನು ಅಪಾರ್ಟ್ಮೆಂಟ್ ಗೆ ಕರೆಯಿಸಿಕೊಂಡು ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರು ನೀಡಿದ್ದಳು. ಇಂದು ಸಹ ತನಿಖಾಧಿಕಾರಿಗಳ ವಿಚಾರಣೆ ವೇಳೆ ಇದೇ ಹೇಳಿಕೆ ನೀಡಿದರೆ, ಮಹಜರಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಸ್ಥಳದ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಲಿದ್ದಾರೆ. ಬಳಿಕ ವಾಯ್ಸ್ ಸ್ಯಾಂಪಲ್ ನನ್ನು ಎಫ್ಎಸ್ಎಲ್ ಗೆ ರವಾನಿಸಲಿದ್ದಾರೆ.

ಒಟ್ಟಿನಲ್ಲಿ ಸಿಡಿ ಲೇಡಿ 28 ದಿನಗಳ ಬಳಿಕ ಪ್ರತ್ಯಕ್ಷಳಾಗಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ನೋಟಿಸ್ ನೀಡಿದ್ದು, ಯುವತಿ ಇಂದು ಆಡುಗೋಡಿಯ ಟೆಕ್ನಿಕಲ್ ಸೆಂಟರ್ ನಲ್ಲಿ ಹಾಜರಾಗಲಿದ್ದಾರೆ.