ದೇವನಹಳ್ಳಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕ್ಯಾಬ್ ಚಾಲಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.
ರಾಮನಗರ ಮೂಲದ ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡ ಚಾಲಕ. ಏರ್ ಪೋರ್ಟ್‍ನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕೊರೊನಾ ಬಳಿಕ ಸರಿಯಾದ ಬಾಡಿಗೆ ಆಗದ ಕಾರಣ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರು. ಇದರಿಂದ ಮನನೊಂದು ಪ್ರತಾಪ್ ಅವರು ನಿನ್ನೆ ಸಂಜೆ ಏರ್ ಪೋರ್ಟ್ ಕ್ಯಾಬಿನಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಆಗ ಭದ್ರತಾ ಸಿಬ್ಬಂದಿ ಕಾರಿನ ಗಾಜು ಒಡೆದು ತೀವ್ರ ಗಾಯಗೊಂಡ ಪ್ರತಾಪ್ ಅವರನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಮೃತ ಚಾಲಕನ ಸಾವು ಟ್ಯಾಕ್ಸಿ ಚಾಲಕರ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಾಪ್ ಅವರ ಶವವನ್ನಿಟ್ಟು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಧರಣಿ ನಡೆಸಲು ಟ್ಯಾಕ್ಸಿ ಚಾಲಕರು ಮುಂದಾಗಿದ್ದಾರೆ.










