ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್ಪ್ರೀತ್ ಬುಮ್ರಾ ಆಯ್ಕೆ.

44

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಐಸಿಸಿ 2024 ರ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2024 ರಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ್ದ ಜಸ್ಪ್ರೀತ್ ಬುಮ್ರಾ ಇದೀಗ ವರ್ಷದ ಟೆಸ್ಟ್ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಪರವಾಗಿ ಸ್ಥಿರ ಪ್ರದರ್ಶನ ನೀಡಿದ ಏಕೈಕ ಆಟಗಾರನೆಂದರೆ ಅದು ಬುಮ್ರಾ. ಇಡೀ ಸರಣಿಯಲ್ಲಿ ಬುಮ್ರಾ ತಮ್ಮ ಕರಾರುವಕ್ಕಾದ ದಾಳಿಯಿಂದ ಆಸೀಸ್ ಆಟಗಾರರನ್ನು ಕಟ್ಟಿಹಾಕದಿದ್ದರೆ, ಟೀಂ ಇಂಡಿಯಾ ಇಡೀ ಸರಣಿಯಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸುವ ಸಾಧ್ಯತೆಗಳಿದ್ದವು. ಆಸೀಸ್ ವಿರುದ್ಧದ ಪ್ರದರ್ಶನಕ್ಕಾಗಿ ಜಸ್ಪ್ರೀತ್ ಬುಮ್ರಾಗೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಇದೀಗ ಐಸಿಸಿ, ಜಸ್ಪ್ರೀತ್ ಬುಮ್ರಾರನ್ನು ವರ್ಷದ ಟೆಸ್ಟ್ ಕ್ರಿಕೆಟಿಗನಾಗಿ ಆಯ್ಕೆ ಮಾಡಿದೆ. ಜಸ್ಪ್ರೀತ್ ಬುಮ್ರಾ 2024 ರಲ್ಲಿ ಒಟ್ಟು 13 ಟೆಸ್ಟ್ ಪಂದ್ಯಗಳಲ್ಲಿ 14.92 ಸರಾಸರಿಯಲ್ಲಿ 71 ವಿಕೆಟ್ ಉರುಳಿಸಿ ಅಗ್ರಪಂಕ್ತಿಯಲ್ಲಿದ್ದಾರೆ. ಈ ಮೂಲಕ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎನಿಸಿಕೊಂಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ 4 ಟೆಸ್ಟ್ ಪಂದ್ಯಗಳಲ್ಲಿ ಸರ್ವಾಧಿಕ 30 ವಿಕೆಟ್ ಉಡಾಯಿಸಿದ ಸಾಧನೆ ಇವರದ್ದಾಗಿದೆ.