ಮಹಿಳಾ ಯುವ ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‍ಗೇರಿದ ಭಾರತ ತಂಡ.

48

ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳೆಯರ ಐಸಿಸಿ 19 ವರ್ಷದೊಳಗಿನ ಟಿ20 ವಿಶ್ವಕಪ್‍ನ 2ನೇ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಇಂದು ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್‍ಗಳಿಂದ ಸೋಲಿಸಿತು. ಇದರೊಂದಿಗೆ ಸತತ 2ನೇ ಬಾರಿಗೆ ಭಾರತ ತಂಡ ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಟೂರ್ನಿಯ ತನ್ನ ಎಲ್ಲಾ ಪಂದ್ಯಗಳಲ್ಲಿ ಭಾರತ ಯುವ ಆಟಗಾರ್ತಿಯರು ಸಲೀಸಾಗಿ ಜಯ ಸಾಧಿಸಿದ್ದಾರೆ. ಇನ್ನು ಈ ಪಂದ್ಯಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಅಂದರೆ ಇದೀಗ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಫೆ.2 ರ ಭಾನುವಾರದಂದು ನಡೆಯಲಿದೆ. ಇಡೀ ಟೂರ್ನಿಯೂದ್ದಕ್ಕೂ ಪಾರುಪತ್ಯ ಮೆರೆದ ಟೀಂ ಇಂಡಿಯಾ ಗ್ರೂಪ್ ಹಂತದಿಂದ ಹಿಡಿದು ಸೆಮಿಫೈನಲ್‍ವರೆಗೂ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಅಂದರೆ ಇಲ್ಲಿಯವರೆಗೂ ಈ ಟೂರ್ನಿಯಲ್ಲಿ ಭಾರತವನ್ನು ಸೋಲಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. 114 ರನ್‍ಗಳ ಬೆನ್ನತ್ತಿದ್ದ ಭಾರತ ತಂಡದ ಆರಂಭಿಕರಿಬ್ಬರೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಜಿ ಕಮಲಿನಿ ಮತ್ತು ಜಿ ತ್ರಿಶಾ 9 ಓವರ್‌ಗಳಲ್ಲಿ 60 ರನ್ ಕಲೆಹಾಕಿದರು. ಆದರೆ ಒಂಬತ್ತನೇ ಓವರ್‌ನ ಕೊನೆಯ ಎಸೆತದಲ್ಲಿ ತ್ರಿಶಾ 29 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ಆ ನಂತರ ಜೊತೆಯಾದ ಸನಿಕಾ ಚಲ್ಕೆ ಹಾಗೂ ಕಮಲಿನಿ ಉಳಿದ ರನ್‍ಗಳನ್ನು ಸುಲಭವಾಗಿ ಬೆನ್ನಟ್ಟಿದರು. ಈ ಮಹತ್ವದ ಪಂದ್ಯದಲ್ಲಿ 50 ಎಸೆತಗಳಲ್ಲಿ 56 ರನ್‍ಗಳ ಇನಿಂಗ್ಸ್ ಆಡಿದ ಕಮಲಿನಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಂತಿಮವಾಗಿ ಟೀಂ ಇಂಡಿಯಾ 15 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗೆಲುವಿನ ಮೆಟ್ಟಿಲೇರಿತು.