ನವದೆಹಲಿ : ಒಮಿಕ್ರಾನ್ ನ ಬಿಎ 2.75 ಎಂಬ ಹೊಸ ಉಪತಳಿ ಭಾರತ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕಳೆದೆರಡು ವಾರಗಳಲ್ಲಿ ಜಾಗತಿಕವಾಗಿ ಶೇ.30 ರಷ್ಟು ಕೊರೊನಾ ಪ್ರಕರಣಗಳು ಹೆಚ್ಚಿವೆ. ಭಾರತದಲ್ಲಿ ಕೊರೊನಾ ವೈರಸ್ ಒಮಿಕ್ರಾನ್ ತಳಿಯ ರೂಪಾಂತರವಾದ ಬಿಎ 2.75 ಉಪತಳಿ ಪತ್ತೆಯಾಗಿದೆ. ಅಲ್ಲದೇ ಈ ತಳಿ ಇನ್ನೂ 10 ದೇಶಗಳಲ್ಲಿ ಕಂಡುಬಂದಿದೆ. ಯುರೋಪ್ ಮತ್ತು ಅಮೆರಿಕದಲ್ಲಿ ಬಿಎ.4 ಮತ್ತು ಬಿಎ.5 ಉಪತಳಿ ಕೊರೊನಾದ ಹೊಸ ಅಲೆ ಎಬ್ಬಿಸುತ್ತಿದೆ. ಭಾರತದಲ್ಲಿ ಪತ್ತೆಯಾದ ಬಿಎ 2.75 ನ ಹೊಸ ತಳಿಯ ಮೇಲೂ ನಿಗಾ ವಹಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಹೇಳಿದ್ದಾರೆ.
ಇನ್ನೂ ಒಮಿಕ್ರಾನ್ ಉಪತಳಿ ಬಿಎ 2.75 ಬಗ್ಗೆ ಡಬ್ಲ್ಯೂಎಚ್ ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಕೂಡ ಮಾಹಿತಿ ನೀಡಿದ್ದು, ಈ ವೈರಸ್ ತಳಿ ಮಾನವ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ. ಪ್ರತಿರಕ್ಷಣೆಯನ್ನು ಬೇಧಿಸುವ ಗುಣ ಈ ವೈರಸ್ ಗೆ ಇದೆಯಾ ಎಂಬ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಿದೆ ಎಂದು ಹೇಳಿದ್ದಾರೆ.










