ನಿನ್ನೆಯಷ್ಟೇ ಕನ್ನಡದ ಖ್ಯಾತ ನಟಿ ದಿವ್ಯಾ ಶ್ರೀಧರ್ ತನ್ನ ಪತಿ ಅರ್ನವ್ ಅಲಿಯಾಸ್ ಅಮ್ಜಾದ್ ಖಾನ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ವಿಡಿಯೋ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪತಿ ಅರ್ನವ್, ನಾನು ಹಲ್ಲೆ ಮಾಡುವಂತಹ ಹುಡುಗ ಅಲ್ಲ. ನನ್ನ ಮನೆಯಲ್ಲಿ ಸಿಸಿಟಿವಿ ಇದೆ. ಯಾರು ಬೇಕಾದರೂ ಬಂದು ನೋಡಬಹುದು. ದಿವ್ಯಾಗೆ ಕೆಲ ಕೆಟ್ಟ ಸ್ನೇಹಿತರ ಸಹವಾಸವಿದೆ. ಅವರೆಲ್ಲ ಸೇರಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಗರ್ಭಪಾತ ಮಾಡಿಸಿಕೊಳ್ಳಲು ದಿವ್ಯಾ ಈ ರೀತಿಯಲ್ಲಿ ನಾಟಕವಾಡುತ್ತಿರಬೇಕು. ನನಗೆ ನನ್ನ ಮಗು ಬೇಕು. ನಾನು ಕೂಡ ಕಮಿಷನರ್ ಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ಕೂಡ ಖ್ಯಾತ ಕಿರುತೆರೆಯ ನಟ. 2017ರಲ್ಲಿ ಅರ್ನವ್ ಮತ್ತು ದಿವ್ಯಾ ಒಂದೇ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ್ದರು. ದಿನವೂ ಶೂಟಿಂಗ್ ನಲ್ಲಿ ಸಿಗುತ್ತಿದ್ದರಿಂದ ಸ್ನೇಹವಾಗಿ, ಆನಂತರ ಪ್ರೀತಿ ಬೆಳೆದಿದೆ. ಐದು ವರ್ಷಗಳ ಕಾಲ ಇಬ್ಬರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ. ಆನಂತರ ಮದುವೆ ಆಗಿದ್ದಾರೆ. ಆದರೆ ಈಗ ಇವರ ಸಂಸಾರದಲ್ಲಿ ಬಿರುಕು ಮೂಡಿದೆ. ಪತಿ ವಿರುದ್ಧ ಹಲ್ಲೆ, ಕಿರುಕುಳ ಆರೋಪವನ್ನು ದಿವ್ಯಾ ಹೊರಿಸಿದ್ದಾರೆ.
ನಟಿ ದಿವ್ಯಾ ಮಾಡಿದ ಆರೋಪವೇನು?: ನಿನ್ನೆ ನಟಿ ದಿವ್ಯಾ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ನಾನು ಮತ್ತು ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ಇತ್ತೀಚೆಗೆ ಮದುವೆಯಾಗಿದ್ದೇವೆ. 2017ರಿಂದ ನಾನು ಮತ್ತು ಅರ್ನವ್ ಇಬ್ಬರೂ ಲಿವಿಂಗ್ ಟು ಗೆದರ್ ಇದ್ದೆವು. 5 ವರ್ಷದಿಂದ ನಾವು ಒಟ್ಟಿಗೆ ಇದ್ದೇವೆ. ಮನೆ ತೆಗೆದುಕೊಳ್ಳಲು ನಾನೇ ಹಣಕಾಸಿನ ನೆರವು ನೀಡಿದ್ದೇನೆ. ಮದುವೆಗಿಂತ ಮೊದಲು ಲಾಕ್ ಡೌನ್ ಟೈಂನಲ್ಲಿ ಅವನಿಗೆ ಏನು ಕೆಲಸ ಇರಲಿಲ್ಲ. ಕೆಲಸವಿಲ್ಲದೇ ಮನೆಯಲ್ಲಿ ಇದ್ದ, ಆಗ 30 ಲಕ್ಷ ಲೋನ್ ಕೊಡಿಸಿ, 30 ಸಾವಿರದಂತೆ ಲೋನ್ ಕಟ್ಟಿದ್ದೇನೆ. ಅವನಿಗೆ ಕೆಲಸವಿಲ್ಲದಿದ್ದರೂ, ನಾನೇ ಸಾಕಿದ್ದೇನೆ. ಮಗುವಿನ ತರಹ ಅವನಿಗೆ ಏನೂ ಆಗದಂತೆ ಜೋಪಾನವಾಗಿ ನೋಡಿಕೊಂಡಿದ್ದೇನೆ. ಆದರೆ, ಅವನಿಂದಲೇ ಈಗ ಕಿರುಕುಳ ಉಂಟಾಗಿದೆ. ನಾನು ಗರ್ಭಿಣಿ ಎಂದೂ ಯೋಚಿಸದೇ ಅರ್ನವ್ ಥಳಿಸಿದ್ದಾರೆ ಎಂದು ಆರೋಪಿಸಿದ್ದರು. ಸದ್ಯ ದಿವ್ಯಾ ಶ್ರೀಧರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.










