ಕನ್ನಡಿಗರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಇರಲ್ಲ : ಎಂಇಎಸ್ ಪುಂಡರಿಗೆ ಬೊಮ್ಮಾಯಿ ಎಚ್ಚರಿಕೆ…

50
firstsuddi

ಬೆಂಗಳೂರು : ಕನ್ನಡಿಗರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಇರಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಚ್ಚರಿಕೆ ನೀಡಿದರು. ಆರ್.ಟಿ. ನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈಗಾಗಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಎಂಇಎಸ್ ನವರು ನಮ್ಮ ನೆಲದಲ್ಲಿ ಕಾನೂನು ಕೈಗೆತ್ತಿಕೊಳ್ಳೋದನ್ನು ಸಹಿಸಲ್ಲ ಎಂದರು.

ಆರ್​ಎಸ್​ಎಸ್ ಮೂಲದ ಬಗ್ಗೆ ಪ್ರಶ್ನಿಸಿದ್ದ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಮೊದಲು ಸಿದ್ದರಾಮಯ್ಯ ಎಲ್ಲಿಂದ ಬಂದಿದ್ದಾರೆ ಅಂತ ಹೇಳಲಿ. ಸಿದ್ದರಾಮಯ್ಯ ಆರ್ಯರಾ? ದ್ರಾವಿಡರಾ?. ಇದನ್ನು ಮೊದಲು ಅವರು ಹೇಳಲಿ ಎಂದು ಮರು ಸವಾಲು ಹಾಕಿದರು.

ಮಂಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡ ಹಿಜಬ್ ವಿವಾದದ ಬಗ್ಗೆ ಮಾತಾಡಿದ ಸಿಎಂ ಬೊಮ್ಮಾಯಿ, ಹಿಜಾಬ್ ವಿವಾದ ಮಾಡುವ ಅಗತ್ಯ ಇಲ್ಲ. ಈಗಾಗಲೇ ಕೋರ್ಟ್ ತನ್ನ ಆದೇಶ ಕೊಟ್ಟಿದೆ. ಎಲ್ಲರೂ ಕೋರ್ಟ್ ಆದೇಶ ಪಾಲಿಸಬೇಕು. ಹಿಜಾಬ್ ಬಗ್ಗೆ ಮಂಗಳೂರು ವಿವಿ ಸಿಂಡಿಕೇಟ್ ನಿರ್ಣಯ ತೆಗೆದುಕೊಂಡಿದೆ. ಆಡಳಿತ ಮಂಡಳಿ ಏನು ನಿರ್ಧಾರ ಮಾಡುತ್ತಾರೋ ಅದನ್ನು ಪಾಲಿಸಬೇಕು. ವಿದ್ಯಾರ್ಥಿಗಳು ಹಿಜಾಬ್ ಬಿಟ್ಟು ವಿದ್ಯಾರ್ಜನೆ ಕಡೆ ಗಮನ ಕೊಡಲಿ ಎಂದು ಮನವಿ ಮಾಡಿದರು.