ಕನ್ನಡ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ವಿಧಿವಶ…

153
firstsuddi

ಬೆಂಗಳೂರು : ಕನ್ನಡದ ನಿಘಂಟು ತಜ್ಞರೆಂದೇ ಖ್ಯಾತಿ ಪಡೆದಿದ್ದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ನಿಧನರಾಗಿದ್ದಾರೆ.

ಪ್ರೊ. ವೆಂಕಟಸುಬ್ಬಯ್ಯ(108) ಅವರು ನಿನ್ನೆ ತಡರಾತ್ರಿ 1.15 ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಒಂದು ವಾರದ ಹಿಂದಷ್ಟೇ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆದರೆ ತಡರಾತ್ರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

1913ರ ಆಗಸ್ಟ್ 13ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಜನಿಸಿದ ಇವರು ಭಾಷಾ ತಜ್ಞ, ಸಂಶೋಧಕ, ಬರಹಗಾರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ವೆಂಕಟ ಸುಬ್ಬಯ್ಯನವರು ಬೆಂಗಳೂರಿನಲ್ಲಿ 2011ರ ಫೆಬ್ರುವರಿ 4ರಿಂದ 6ರವರೆಗೆ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.