ಬೆಂಗಳೂರು: ಐತಿಹಾಸಿಕ ಕರಗ ಮಹೋತ್ಸವದ ಕರ್ಪೂರ ಪೂಜೆ ವೇಳೆ ಅಗ್ನಿ ಅವಘಡ ಸಂಭವಿಸಿ ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದ ರಸ್ತೆ ಬದಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿದೆ.
ಕರಗ ಮಹೋತ್ಸವವು ಮಾರ್ಚ್ 29ರಿಂದ ಪ್ರಾರಂಭವಾಗಿದೆ. ಒಟ್ಟು 11 ದಿನಗಳ ಕಾಲ ಈ ಕರಗ ನಡೆಯುತ್ತದೆ. ಪುಷ್ಪ ಕರಗವನ್ನು ಕಳೆದ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅರ್ಚಕ ಜ್ಞಾನೇಂದ್ರ ವಹ್ನಿಕುಲ ಗೌಡ ಅವರು ನೆರವೇರಿಸಲಿದ್ದಾರೆ. ಮಧ್ಯರಾತ್ರಿ 12.30ಕ್ಕೆ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾರಥೋತ್ಸವ ನಡೆಯಲಿದೆ.
ಮೆರವಣಿಗೆಯು ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಲಾಗುತ್ತದೆ. ಹಾಲುಬೀದಿ, ಕಬ್ಬನ್ಪೇಟೆ, ಸುಣ್ಣಕಲ್ ಪೇಟೆ ಮಾರ್ಗವಾಗಿ ಕುಲ ಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ನಂತರ ನರಸಿಂಹ ಜೋಯಿಸ್ ಗಲ್ಲಿ ಮಾರ್ಗವಾಗಿ ಸೂರ್ಯೋದಯದ ವೇಳೆಗೆ ದೇವಾಲಯವನ್ನು ತಲುಪಲಿದೆ.
ಕರಗ ಶಕ್ತ್ಯೋತ್ಸವ ಹಿನ್ನೆಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ದೇವಸ್ಥಾನದ ಸುತ್ತಮುತ್ತ 32 ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.










