85 ವರ್ಷದ ವೃದ್ಧೆಯನ್ನು ಕೊಂದು ಅತ್ಯಾಚಾರವೆಸಗಿದ ಆರೋಪಿಯ ಬಂಧನ…

100
firstsuddi

ಹಾಸನ: 85 ವರ್ಷದ ವೃದ್ಧೆಯನ್ನು ಕೊಲೆ ಮಾಡಿ ಬಳಿಕ ಅತ್ಯಾಚಾರವೆಸಗಿದ ಅಮಾನುಷ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅರಸೀಕೆರೆ ತಾಲೂಕಿನ ಯರೇಹಳ್ಳಿ ಗ್ರಾಮದ ಮಿಥುನ್ ಕುಮಾರ್ (32) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, 5 ವರ್ಷದ ಹಿಂದೆ ಇದೇ ರೀತಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಏಪ್ರಿಲ್ 1 ರಂದು ತನ್ನ ಜಮೀನಿನ ಬಳಿ ತೆರಳಿದ್ದ 85 ವರ್ಷದ ವೃದ್ಧೆ ದಾರಿ ಗೊತ್ತಿಲ್ಲದೆ ಬೇರೆ ಕಡೆ ಹೋಗಿದ್ದಾರೆ. ಈ ವೇಳೆ ಮಿಥುನ್ ಕುಮಾರ್ ಅಜ್ಜಿಯನ್ನು ಜಮೀನಿನ ಬಳಿ ಬಿಡುವುದಾಗಿ ಬೈಕಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ತೋರಿದ ವೃದ್ಧೆಯ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಬಳಿಕ ಅತ್ಯಾಚಾರ ಎಸಗಿದ್ದಾನೆ.

ಇತ್ತ ತಾಯಿ ಮನೆಗೆ ಬಂದಿಲ್ಲ ಎಂದು ಏಪ್ರಿಲ್ 2ರಂದು ಕುಟುಂಬಸ್ಥರು ಹುಡುಕಾಡಿದ ವೇಳೆ ಯರೇಹಳ್ಳಿ ಗ್ರಾಮದ ಜಮೀನಿನಲ್ಲಿ ವೃದ್ಧೆಯ ಮೃತದೇಹ ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕರಣ ಸಂಬಂಧ ಅನುಮಾನಾಸ್ಪದ ಸಾವು ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಆರೋಪಿಯ ಮೇಲೆ ಶಂಕಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ.