ಕರಿ ಹರಿಯುವ ಹಬ್ಬ ; ಎತ್ತು ಗುದ್ದಿ ಯುವಕ ಸಾವು…

90
firstsuddi

ಗದಗ : ಕಾರಹುಣ್ಣಿಮೆಯ ಪ್ರಯುಕ್ತ ಕರಿಹರಿಯುವ ಹಬ್ಬದ ಸಂದರ್ಭದಲ್ಲಿ ಎತ್ತು ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.

ಕಿರಣಕುಮಾರ ಮಲಕಾಜಪ್ಪ ನೆರ್ತಿ(22) ಮೃತ ದುರ್ದೈವಿ. ಸೂರಣಗಿ ಗ್ರಾಮದ ದೊಡ್ಡ ಆಂಜನೇಯ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಗುರುವಾರ ಕೋವಿಡ್ ನಿಯಮ ಉಲ್ಲಂಘಿಸಿ ಎತ್ತುಗಳನ್ನು ಓಡಿಸುವ ಹಬ್ಬವನ್ನು ಆಯೋಜಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಕರಿ ಹರಿಯುವ ಹಬ್ಬದಲ್ಲಿ ರಭಸದಿಂದ ಓಡಿ ಬಂದ ಎತ್ತು ತನ್ನನ್ನು ಹಿಡಿಯಲು ಪ್ರಯತ್ನಿಸಿದ ಯುವಕ ಕಿರಣ್ ಕುಮಾರ್ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಬಲವಾಗಿ ಗುದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಯುವಕನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಸಂಜೆ ಸಾವನ್ನಪ್ಪಿದ್ದಾನೆ.

ಮೃತ ಯುವಕ ಪದವೀಧರನಾಗಿದ್ದು, ತಂದೆ ನಿವೃತ್ತ ಸೈನಿಕ. ಯುವಕನೂ ತಂದೆಯ ಸೈನಿಕ ಕೋಟಾದಡಿ ಸೇನೆ ಸೇರಲು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಲಿಖಿತ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

ಇನ್ನೂ ಕೋವಿಡ್ ನಿಯಮ ಮೀರಿ ಕರಿ ಹರಿಯುವ ಹಬ್ಬದಲ್ಲಿ ಪಾಲ್ಗೊಂಡಿದ್ದ ಆರೋಪದಲ್ಲಿ ಗ್ರಾಮದ 21 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.