ಐಎಂಎ ವಂಚನೆ ಪ್ರಕರಣ : ರೋಷನ್ ಬೇಗ್ ಅವರ ಆಸ್ತಿ ಜಪ್ತಿಗೆ ಕ್ರಮ…

86
firstsuddi

ಬೆಂಗಳೂರು : ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿ ಆಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ಆಸ್ತಿ ಜಪ್ತಿಗೆ ಕ್ರಮ ಕೈಗೊಂಡಿರುವುದಾಗಿ ಹೈಕೋರ್ಟ್ ಗೆ ರಾಜ್ಯ ಸರ್ಕಾರ ತಿಳಿಸಿದೆ.

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಪಾಷಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ನಿನ್ನೆ ವಿಚಾರಣೆ ನಡೆಸಿತು. ಈ ವೇಳೆ ಪೀಠಕ್ಕೆ ಮಾಹಿತಿ ನೀಡಿದ ಸರ್ಕಾರದ ಪರ ವಕೀಲರು ರೋಷನ್ ಬೇಗ್ ಅವರ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗಿದ್ದು, ಬೇಗ್ ಅವರ ಆಸ್ತಿ ವಿವರಗಳ ಕುರಿತು ಮಾಹಿತಿ ನೀಡುವಂತೆ ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆಸ್ತಿ ಕುರಿತು ನಿಖರ ಮಾಹಿತಿಗಳು ಲಭ್ಯವಾದ ನಂತರ ಕೆಪಿಐಡಿ ಕಾಯ್ದೆಯಡಿ ಜಪ್ತಿಗೆ ಕ್ರಮ ಜರುಗಿಸಲಾಗುತ್ತದೆ. ಹಾಗೆಯೇ, ಆಸ್ತಿ ಪರಭಾರೆಗೂ ಮುನ್ನ ಹೈಕೋರ್ಟ್ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಸರ್ಕಾರಿ ಶಾಲೆಗೆ ಐಎಂಎ ಕಂಪನಿ ನೀಡಿರುವ 10 ಕೋಟಿ ರೂಪಾಯಿ ದೇಣಿಗೆ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿತು. ಹೇಳಿಕೆ ಪರಿಗಣಿಸಿದ ನ್ಯಾಯಪೀಠ, ದೇಣಿಗೆ ನೀಡುವ ಕುರಿತು ಸರ್ಕಾರ ಹಾಗೂ ಎಐಎಂ ಕಂಪನಿ ನಡುವೆ ಆಗಿರುವ ಒಪ್ಪಂದದ ಕಾನೂನಾತ್ಮಕ ಅಂಶಗಳನ್ನು ನ್ಯಾಯಾಲಯ ಪರಿಶೀಲನೆ ನಡೆಸಲಿದೆ ಎಂದು ವಿಚಾರಣೆಯನ್ನು ಮುಂದೂಡಿತು.