ನವದೆಹಲಿ : ನಾನಿಲ್ಲಿ ಸದನದಲ್ಲಿ ಮಾತನಾಡ್ತಿದ್ದರೆ, ಮೋದಿ ನನ್ನ ಕ್ಷೇತ್ರಕ್ಕೆ ಹೋಗಿ ಬಂದಿದ್ದಾರೆ ಎಂದು ನಿನ್ನೆ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದ ಮಲ್ಲಿಕಾರ್ಜುನ್ ಖರ್ಗೆಗೆ ಪ್ರಧಾನಿ ನರೇಂದ್ರ ಮೋದಿಯವರು ತಿರುಗೇಟು ನೀಡಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನಾನು ಕಲಬುರಗಿಗೆ ಭೇಟಿ ನೀಡಿದ ವಿಚಾರ ಕುರಿತು ನೀವು ಟೀಕಿಸಿದ್ದೀರಿ. ಅದಕ್ಕೆ ನಾನು ಈಗ ಉತ್ತರ ಕೊಡುತ್ತಿದ್ದೇನೆ. ಖರ್ಗೆ ಅವರು ಕಲಬುರಗಿಯಲ್ಲಿ ಆಗಿರುವ ಕೆಲಸವನ್ನು ನೋಡಬೇಕು. ಕರ್ನಾಟಕದಲ್ಲಿ 1.70 ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಅದರಲ್ಲೂ ಕಲಬುರಗಿಯಲ್ಲಿ 8 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಎಷ್ಟೋ ಜನರು ಖಾತೆ ತೆರೆಯುತ್ತಿರುವಾಗ ಯಾರದ್ದೋ ಒಬ್ಬರದ್ದು ಖಾತೆ ಮುಚ್ಚುತ್ತಿದೆ. ನನಗೆ ನೋವು ಅರ್ಥವಾಗುತ್ತದೆ ಎಂದು ಕಾಲೆಳೆದರು.
ಕಳೆದ 3-4 ವರ್ಷಗಳಲ್ಲಿ ಸುಮಾರು 11 ಕೋಟಿ ಮನೆಗಳು ನಲ್ಲಿ ನೀರಿನ ಸಂಪರ್ಕ ಪಡೆದಿವೆ. ನಾವು ಜನ್ ಧನ್ ಖಾತೆ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ ದೇಶಾದ್ಯಂತ 48 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಕರ್ನಾಟಕದಲ್ಲಿ 1.70 ಕೋಟಿ ಖಾತೆ ತೆರೆದಿವೆ. ನಾವು ಶಾಶ್ವತ ಪರಿಹಾರಗಳತ್ತ ಸಾಗುತ್ತಿದ್ದೇವೆ. ವಿಷಯಗಳನ್ನು ಎತ್ತಿಕೊಂಡು ಸಮಸ್ಯೆಗಳನ್ನು ಸೃಷ್ಟಿಸಿದ ನಂತರ ನಾವು ಓಡಿಹೋಗುವುದಿಲ್ಲ. ನಾವು ದೇಶದ ಪ್ರಮುಖ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ಪರಿಹಾರಗಳನ್ನು ಹುಡುಕುತ್ತೇವೆ ಎಂದು ಹೇಳಿದರು.










