ಕಳಸ : ಚಹಾ ತೋಟದ ಮಾಲೀಕರು ರಸ್ತೆಗೆ ಗೇಟ್ ಅಳವಡಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರ ಅಳಲು…

298
firstsuddi

ಕಳಸ : ಕಳಸ ಹೋಬಳಿಯ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಚಹಾ ತೋಟದ ಮಾಲಿಕರು ಖಾಂಡ್ಯ ಗಿರಿಜನರ ಮನೆಗಳಿಗೆ ಹೋಗುವ ರಸ್ತೆಗಳಿಗೆ ಗೇಟ್ ಗಳನ್ನು ಅಳವಡಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಖಾಂಡ್ಯ ಗ್ರಾಮದಲ್ಲಿ 20 ಕುಟುಂಬಗಳಿವೆ. ಎಲ್ಲರೂ ಗಿರಿಜನ ಕುಟುಂಬಕ್ಕೆ ಸೇರಿದವರು. ಈ ಕುಟುಂಬಗಳು ಅನಾಧಿ ಕಾಲದಿಂದಲೂ ಖಾಂಡ್ಯ ಪ್ರದೇಶದಲ್ಲಿ ಜಮೀನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಗ್ರಾಮಕ್ಕೆ ಸರ್ಕಾರದಿಂದ ಸಾಕಷ್ಟು ಅನುದಾನಗಳು ಬಂದು ರಸ್ತೆ, ನೀರು, ಮನೆಗಳನ್ನು ನೀಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಈ ಕುಟುಂಬಗಳು ಖಾಸಗಿ ಚಹ ತೋಟದ ಮದ್ಯೆ ಹಾದು ಹೋಗುವ ಎರಡೂವರೆ ಕಿ.ಮೀ ದೂರದ ರಸ್ತೆಯನ್ನೆ ಅವಲಂಬಿಸಿದ್ದಾರೆ. ಅನಾಧಿಕಾಲದಿಂದಲೂ ಇದೇ ರಸ್ತೆಯ ಮುಖಾಂತರ ನಿತ್ಯ ವಾಹನಗಳು, ಶಾಲಾ ಮಕ್ಕಳು, ಆಂಬ್ಯೂಲೆನ್ಸ್ ಗಳು, ದಿನ ನಿತ್ಯದ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಗಳನ್ನು ನೀಡುತ್ತಿರಲಿಲ್ಲ. ಆದರೆ ಐದು ತಿಂಗಳ ಹಿಂದೆ ಕೊರೋನದ ನೆಪವೊಡ್ಡಿ ಎಸ್ಟೇಟ್ ಮಾಲಿಕರು ಖಾಂಡ್ಯ ಹೋಗುವ ರಸ್ತೆಗೆ ಗೇಟ್ ಅಳವಡಿಸಿದರು. ಇದಕ್ಕೂ ಗ್ರಾಮಸ್ಥರು ಸಹಮತ ನೀಡಿದ್ದರು. ಆದರೆ ಈಗ ಒಂದೇ ರಸ್ತೆಗೆ ಆರು ಕಡೆ ಗೇಟ್‍ಗಳನ್ನು ನಿರ್ಮಿಸಿ ಗ್ರಾಮಕ್ಕೆ ವಾಹನಗಳನ್ನು ಹೋಗೋಕೆ ಬಿಡದೆ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರಸ್ತೆಗೆ ಗೇಟ್ ಅಳವಡಿಸಿ ತೊಂದರೆ ಕೊಡುತ್ತಿರುವ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರನ್ನು ನೀಡಿದ್ದರು. ಈ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಕಳಸ ನಾಡ ಕಛೇರಿಯ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ನೀಡಲು ಸೂಚನೆ ನೀಡಿದ್ದರು. ಅದರಂತೆ ಕಂದಾಯ ನಿರೀಕ್ಷಕ ಅಜ್ಜೇ ಗೌಡ, ಗ್ರಾಮ ಸಹಾಯಕ ಮೆಹಬೂಬ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧೀರ್ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿದ್ದರು. ಅಧಿಕಾರಿಗಳು ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕಚೇರಿಗಳಿಗೆ ಬೀಗ ಹಾಕಿ ವ್ಯವಸ್ಥಾಪಕ ತನ್ನ ವಸತಿ ನಿಲಯದಲ್ಲಿ ಕುಳಿತರು. ಅಸಿಸ್ಟೆಂಟ್ ಮ್ಯಾನೆಜರ್ ಪ್ರೇಮ್ ಕುಮಾರ್ ಬಂದು ಎರಡು ದಿನ ಬಿಟ್ಟು ನಂತರ ಮಾತುಕತೆಗೆ ಬರುತ್ತಾರಂತೆ ಎಂದು ಹೇಳಿದರು. ಅಧಿಕಾರಿಗಳು ಮತ್ತು ಗ್ರಾಮಸ್ಥರು ಎಷ್ಟೇ ಮನವಿ ಮಾಡಿದರೂ ಕೂಡ ವ್ಯವಸ್ಥಾಪಕ ಸ್ಥಳಕ್ಕೆ ಬರದೆ ಉದ್ದಟತನ ತೋರಿಸಿದರು. ಎರಡು ಗಂಟೆಗಳ ಕಾಲ ಕಾದ ಅಧಿಕಾರಿಗಳು ವಾಪಾಸು ಮರಳಬೇಕಾಯಿತು.
ಎಸ್ಟೇಟ್ ಮಾಲಿಕರ ವರ್ತನೆಯಿಂದ ಗ್ರಾಮಸ್ಥರು ಎಸ್ಟೇಟ್ ವಿರುದ್ಧ ಆಕ್ರೋಶಗೊಂಡರು. 60 ವರ್ಷಗಳಿಂದ ಇದೇ ರಸ್ತೆಯನ್ನು ಅವಲಂಬಿಸಿದ್ದ ನಮಗೆ ಈಗ ಹೊಸದಾಗಿ ಬಂದಿರುವ ವ್ಯವಸ್ಥಾಪಕ ರಸ್ತೆಗಳಿಗೆ ಹೋಗುವ ರಸ್ತೆಗಳಿಗೆ ಗೇಟ್ ಅಳವಡಿಸಿ ತೊಂದರೆ ನೀಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ತೀರಾ ಅನಾರೋಗ್ಯ ಪೀಡಿತ ಎರಡು ತಿಂಗಳ ಮಗುವನ್ನು ವಾಹನವನ್ನು ಹೋಗಲು ಬಿಡದೆ ಇರುವ ಹಿನ್ನಲೆಯಲ್ಲಿ ಹೋತ್ತುಕೊಂಡು ಬರಲಾಯಿತು. 20 ಮಕ್ಕಳು ಶಾಲೆಗೆ ತೆರಳುತ್ತಾರೆ. ವಾಹನವನ್ನು ಬರೋಕೆ ಬಿಡದೆ ಇರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳು ಇನ್ಯಾವ ರೀತಿಯಲ್ಲಿ ಶಾಲೆಗೆ ತೆರಳುವುದು. ಇರುವುದು ಇದೊಂದೇ ದಾರಿ. ಪ್ರತಿಯೊಂದು ದಿನ ಬಳಕೆಯ ಸಾಮಾನುಗಳನ್ನು ಕೂಡ ಹೊತ್ತುಕೊಂಡು ಹೋಗಬೇಕಾಗಿದೆ. ವಾಹನಗಳು ತಿರುಗಾಡುವ ಎರಡೂ ವರೆ ಕಿ.ಮೀ ದೂರದ ರಸ್ತೆಗೆ ಗೇಟ್ ಅಳವಡಿಸಿ ಯಾವುದೇ ವಾಹನವೂ ತೆರಳಲು ಸಾದ್ಯವಾಗದೆ ಅಲ್ಲದೆ ಸುತ್ತಿ ಬಳಸಿ ಹೋಗುವ 11 ಕಿ.ಮೀ ದೂರದ ರಸ್ತೆಯಲ್ಲಿ ಹೋಗಿ ಅನ್ನುತ್ತಿದ್ದಾರೆ.
ಈ ಬಗ್ಗೆ ಎಸ್ಟೇಟ್ ವ್ಯವಸ್ಥಾಪಕರಿಗೆ ಲಿಖಿತವಾಗಿ ದೂರು ನೀಡಿದರೂ ಕೂಡ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸತೀಶ್, ಸಂತೋಷ್, ಪ್ರಸಾದ್, ಸಂದೀಪ್, ಸಂಜೀವ, ಸೀನಾ, ಬಾಲು, ಪ್ರವೀಣ್ ಇತರರು ಇದ್ದರು.