ಕುಲಕಸುಬಿಗೂ ಕಂಟಕ ತಂದಿಟ್ಟಿತು ಕೊರೋನಾ…!

322
firstsuddi

ಡಾ. ಎಂ.ಎಸ್. ಮಣಿ

ಅದು ಕ್ಷೌರದ ಅಂಗಡಿ. ಜನ ಕ್ಷೌರ ಮಾಡಿಸಿಕೊಳ್ಳಲು ತಮ್ಮ ಸರತಿಗಾಗಿ ಕಾಯುತ್ತಿದ್ದರು. ಅವರೆಲ್ಲರ ಮನಸ್ಸು ಚಡಪಡಿಸುತ್ತಿತ್ತು. ಕಾರಣ ಕ್ಷೌರಮಾಡಿಸಿಕೊಂಡ ನಂತರ ಏನಾಗುವುದೋ ಎಂಬ ಭೀತಿ ಅವರಲ್ಲಿತ್ತು. ಜನಜಂಗುಳಿ ಇದ್ದರೂ ಅಲ್ಲಿ ನಿಗೂಢ ಮೌನವಿತ್ತು. ಅವರೆಲ್ಲರ ಮುಖದಲ್ಲೂ ದುಗುಡವಿತ್ತು. ನಗುವಿನ ಸಣ್ಣ ರೇಖೆಯೂ ಅವರ ಮುಖದಲ್ಲಿರಲಿಲ್ಲ. ಅಲ್ಲಿದ್ದವರ ಮೊಬೈಲ್‍ಗಳೆಲ್ಲವೂ ಪ್ರತಿ ಐದು ನಿಮಿಷಕ್ಕೆ ರಿಂಗಣಿಸುತ್ತಲೇ ಇತ್ತು. ಕೆಲವರ ಮೊಬೈಲ್‍ಗೆ ಟವರ್ ಸಿಗದೆ ಮಾತನಾಡಲು ಪರದಾಡುತ್ತಿದ್ದರು. ಇನ್ನುಳಿದವರು ಆಯಿತು… ಸಾಲಿನಲ್ಲಿ ನಿಂತಿರುವೆ, ಮಾಸ್ಕ್ ಬಿಚ್ಚಿಲ್ಲ, ಪ್ರತಿ ಐದು ನಿಮಿಷಕ್ಕೊಮ್ಮೆ ಸ್ಯಾನಿಟೈಜರ್ ಬಳಸುತ್ತಿರುವೆ, ಸಾಮಾಜಿಕ ಅಂತರ ಕಾಪಾಡಿಕೊಂಡಿರುವೆ, ಸರತಿಯಲ್ಲಿ ನಿಂತವರ್ಯಾರು ಸೀನುತ್ತಿಲ್ಲ, ಕೆಮ್ಮುತ್ತಿಲ್ಲ ಎಂದು ಬಡಬಡಿಸುತ್ತಲೇ ಇದ್ದರು.

ಕ್ಷೌರದಂಗಡಿಯ ಒಳಗಿನಿಂದ ಆಗಾಗ ಓರ್ವ ಬಂದು ಸರತಿಯನ್ನು ಕಂಡು, ಬೇಗ, ಬೇಗ ಆಗುತ್ತದೆ, ದಯವಿಟ್ಟು ಕಾಯಿರಿ ಸರ್ ಎಂದೇ ಹೇಳುತ್ತಿದ್ದ. ಸರತಿಯಲ್ಲಿ ನಿಂತವರು ಕಾಯಲಾಗದೆ ಎಲ್ಲಿ ಹಿಂತಿರುಗಿ ಹೋಗಿಬಿಡುವರೋ ಎಂದೆಣಿಸಿ, ಮುಂದಿನ ವಾರ ಮತ್ತೆ ಲಾಕ್‍ಡೌನ್ ಆಗುವ ವಿಶ್ವಾಸ ಇದೆ ಎಂಬ ಬುಲೆಟಿನ್‍ನನ್ನು ಆಗಾಗ ಹೊರಹಾಕುತ್ತಿದ್ದ. ಸರತಿಯಲ್ಲಿ ನಿಂತವರಲ್ಲಿ ಖಾದಿದಾರಿಯೊಬ್ಬ ನಿಂತಿದ್ದ. ಅವನು ಈಗತಾನೇ ಮುಖ್ಯಮಂತ್ರಿ ಕಛೇರಿಗೆ ಕರೆ ಮಾಡಿದ್ದೆ, ಲಾಕ್‍ಡೌನ್ ಮಾಡುವುದಿಲ್ಲ ಎಂದಿದ್ದಾರೆ. ಎಂದೇಳುತ್ತಾ ಎಲ್ಲರ ನಡುವೆ ತಾನು ಪ್ರಭಾವಿ ಎನಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಮುಖ್ಯಮಂತ್ರಿ ಕಛೇರಿಯಲ್ಲಿರುವ ಎಲ್ಲರ ಪರಿಚಯ ತನಗಿದೆ ಎಂದು ಎಲ್ಲರ ಗಮನ ಸೆಳೆಯುವುದು ಅವನ ಉದ್ದೇಶವಾಗಿತ್ತು.

ಆದರೆ ನಾನು ಮಾತ್ರ ಏನೂ ಅರಿಯದವನಂತೆ ನಿಂತಿದ್ದೆ. ಆದರೂ ಕಾಗೆಯಂತೆ ಕುತ್ತಿಗೆ ಹೊರಳಿಸಿ, ಕಣ್ಣಲ್ಲಿ ಆತಂಕ ತುಂಬಿಕೊಂಡು, ನನಗೂ ಭಯವಿದೆ ಎಂದು ಬಿಂಬಿಸಲು ಪ್ರಯತ್ನಿಸಿ ಮನೆ ಕಡೆ ಹೆಜ್ಜೆ ಹಾಕಿದೆ.

ಲಾಕ್‍ಡೌನ್ ತೆರವು ಗೊಳಿಸಿದಾಗ ಜನಜಂಗುಳಿ ಆಹಾರದ ಮಳಿಗೆಗಳಲ್ಲಿ ಮಾತ್ರ ಇದ್ದಿಲ್ಲ. ಕ್ಷೌರದಂಗಡಿಗಳ ಬಳಿಯೂ ಇತ್ತು. ಕ್ಷೌರದಂಗಡಿಗೆ ದಾಂಗುಡಿ ಇಟ್ಟವರಲ್ಲಿ ಮಹಿಳೆಯರು, ವಯೋವೃದ್ಧರು, ಮಕ್ಕಳು ಕೂಡ ಇದ್ದರು. ಕಾರಣ ಇವರೆಲ್ಲರ ಕೇಶ ಉದ್ದುದ್ದ ಬೆಳೆದು, ಅವರ ಮುಖ ಸೌಂದರ್ಯವನ್ನು ಹಾಳುಗೆಡವಿತ್ತು.

ಹೌದು. ಲಿಕ್ಕರ್ ಮಳಿಗೆಗಳನ್ನು, ಕ್ಲಬ್, ಪಬ್, ಬಾರ್‍ಗಳನ್ನು ತೆರೆಯುವುದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಆದರೆ ಕ್ಷೌರದಂಗಡಿಗಳನ್ನು ತೆರೆದರೆ ಸರ್ಕಾರಕ್ಕೆ ಆದಾಯ ಬರುವುದಿಲ್ಲವಾದರೂ ಸಮಾಜ ಸುಂದರವಾಗಿ ಕಾಣುತ್ತದೆ. ಹೀಗಾಗಿ ಕ್ಷೌರಿಕೆರ ಸೇವೆಯನ್ನು `ಅಗತ್ಯ ಸೇವೆ’ ಎಂದು ಪರಿಗಣಿಸಲೇಬೇಕಿದೆ. ಗ್ರಾಹಕನಿಗೆ ಅತ್ಯಂತ ಸಾಮೀಪ್ಯದಿಂದ ಮತ್ತು ಅಪ್ಯಾಯಮಾನತೆಯಿಂದ ಸ್ಪರ್ಷಿಸಿ ಸೋಂಕಿನ ದಿನಮಾನಗಳಲ್ಲಿ ಹೇಗೆ ಸೇವೆ ನೀಡಲು ಸಾಧ್ಯ. ಇನ್ನೂ ನಿಷೇಧ ಹೇರಬೇಕೆಂದು ವಾದಿಸುವವರು ಇದ್ದಾರೆ.

ಸದಾ ಅನುಮಾನ, ಅವಮಾನಗಳಿಂದಲೇ ಬದುಕು ದೂಡುವ ಕ್ಷೌರಿಕರು ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚು ಭಾದನೆಗೊಳಗಾಗಿದ್ದಾರೆ. ಕೆಲವರು ಪಟ್ಟಣ ತೊರೆದು ಹಳ್ಳಿಗಳತ್ತ ತೆರಳಿ ಮತ್ತೆ ಕುಲಕಸುಬಿಗೆ ಜೋತು ಬಿದ್ದು ಜೀವನವನ್ನು ಕಟ್ಟಿಕಂಡವರಿದ್ದಾರೆ.

ಇಂತಹವರಲ್ಲಿ ರಂಗರಾಜ ಕೂಡ ಒಬ್ಬರಾಗಿದ್ದಾರೆ. ಇವರು ಕ್ಷೌರಿಕ ವೃತ್ತಿ ಬಿಟ್ಟು ಬೆಂಗಳೂರಿನ ಬಾಣಸವಾಡಿಯೊಂದರ ಅಪಾರ್ಟ್‍ಮೆಂಟ್ ಒಂದರ `ನಿರ್ವಹಣೆ’ಯಲ್ಲಿ ತೊಡಗಿದ್ದರು. ಲಾಕ್‍ಡೌನ್ ಘೋಷಣೆಯಾದಾಗ ನಗರ ತೊರೆದು ತನ್ನೂರಿಗೆ ತೆರಳಿದ್ದರು. ಅಲ್ಲಿ ಬಾಲ್ಯದ ಗೆಳೆಯರ ಸಹಕಾರದಿಂದ ಸೀಟಿ-ಲಾಠಿ ಬಿಟ್ಟು ಕತ್ತರಿ ಹಿಡಿದು ನಿಂತಿದ್ದಾರೆ. ಬಹುಶಃ ಬೆಂಗಳೂರಿನಲ್ಲಿ ನಿದ್ದೆಗೆಟ್ಟು ದುಡಿದು ಗಳಿಸುತ್ತಿದ್ದುದಕ್ಕಿಂತ, ನೆಮ್ಮದಿಯಾಗಿ ಇದೀಗ ದುಡಿಯುತ್ತಿರಬೇಕು.

ಹಾಗಾದರೆ ಕುಲಕಸುಬುದಾರರು ಮರಳಿ ತಮ್ಮ ವೃತ್ತಿಗಳಿಗೆ ಮರಳಿಬಿಡುತ್ತಾರೆಯೇ? ಎಂಬ ಪ್ರಶ್ನೆಯೂ ನಿಮ್ಮಲ್ಲಿ ಏಳಬಹುದು. ಅದನ್ನೀಗಲೇ ಹೇಳಲಾಗದು. ಪಟ್ಟಣ ಸೇರಿ ನೆಲೆ ಕೊಡುಕೊಂಡಿದ್ದ ಹಲವರು ಮತ್ತೆ ಹಳ್ಳಿಗಳಿಗೆ ತೆರಳಿ ಕುಲವೃತ್ತಿಯಲ್ಲಿ ತೊಡಗಿದ್ದಾರೆ. ಇದು ತಾತ್ಕಾಲಿಕವೂ ಆಗಿರಬಹುದು. ಕಾರಣ, ಪಟ್ಟಣದ ಬದುಕು ಕಂಡವರು ಹಳ್ಳಿಗಾಡಲ್ಲಿ ಬದುಕು ಕಂಡುಕೊಳ್ಳುವುದು ಕಡಿಮೆ.

ಇನ್ನೂ ಹಳ್ಳಿಯಲ್ಲಿದ್ದ ಮನೆ-ಹೊಲ ಎಲ್ಲವನ್ನೂ ಮಾರಾಟ ಮಾಡಿ ಪಟ್ಟಣದಲ್ಲಿ ನೆಲೆಕಾಣಲು ಪ್ರಯತ್ನಿಸಿ ಅಂಗಡಿ ತೆರೆದವರ ಕಥೆ ಗೋಳಿನಿಂದ ಕೂಡಿದೆ. ಇಂತಹವರೆಲ್ಲರೂ ಲಾಕ್‍ಡೌನ್‍ನಿಂದ ಬೀದಿಗೆ ಬಿದ್ದಿದ್ದಾರೆ. ಇನ್ನೂ ಕೆಲವರು 20-30 ವರ್ಷಗಳ ಕಾಲ ದುಡಿದ ದುಡಿಮೆಗೆ ಸಾಲವನ್ನು ಮಾಡಿ ಎ.ಸಿ., ಟಿ.ವಿ. ಹಾಕಿಸಿ ಕ್ಷೌರದಂಗಡಿಗೆ ಬಾಡಿಗೆ ಕಟ್ಟಲಾಗದೆ ಅಂಗಡಿಗಳನ್ನೇ ತೊರೆದು ರಾತ್ರೋರಾತ್ರಿ ಓಡಿಹೋದವರು ಇದ್ದಾರೆ.

ಇರಲಿ, ಕ್ಷೌರದ ಬಗ್ಗೆ ನಾವು ಲಘುವಾಗಿ ಮಾತನಾಡಬಹುದು. ಹಾಸ್ಯ-ವ್ಯಂಗ್ಯಮಿಶ್ರಿತವಾಗಿ ಕುಹಕ ನುಡಿಯನ್ನಾಡಬಹುದು. ಆದರೆ ನಿಂದಕರಿಗೆ ಗೊತ್ತಿಲ್ಲ. ಜಗತ್ತಿನ ಅತ್ಯಂತ ಪುರಾತನ ವೃತ್ತಿಗಳಲ್ಲಿ `ಕೇಶಮುಂಡನ’, `ಕೇಶವಿನ್ಯಾಸ’ ಒಂದಾಗಿದೆ. ಇದು ಸಮುದಾಯವೊಂದರ ಜೀವನೋಪಾಯದ ಮಾರ್ಗ ಎಂದು ನೀವುಗಳು ಭಾವಿಸಿದ್ದರೆ ಅದು ತಪ್ಪು.

ಇವರ ಶ್ರೇಷ್ಠತೆಯನ್ನು ಮುಘಲ್ ಸಾಮ್ರಾಜ್ಯದ ಸರ್ವಶ್ರೇಷ್ಠ ದೊರೆ ಅಕ್ಬರ್‍ನ ಆಳ್ವಿಕೆಯಲ್ಲಿ ಕಾಣಬಹುದು. ಒಮ್ಮೆ ಅಕ್ಬರ್ ಸಂದೇಶವೊಂದನ್ನು ಕಾಬೂಲ್‍ಗೆ ಹೊತ್ತೊಯ್ಯಲು ಯಾರು ಸೂಕ್ತ ಎಂದು ಬೀರ್‍ಬಲ್‍ನನ್ನು ಕೇಳುತ್ತಾನೆ. ಆಗ ಬೀರ್‍ಬಲ್ ಸಂದೇಶವನ್ನು ಹೊತ್ತೊಯ್ಯಲು `ಕ್ಷೌರಿಕ’ರೊಬ್ಬನನ್ನು ಆಯ್ಕೆ ಮಾಡಿ ಕಳುಹಿಸಿಕೊಟ್ಟರಂತೆ. ಇಲ್ಲಿ. `ಕ್ಷೌರಿಕ’ ಸಮುದಾಯ ಅದೆಷ್ಟು ನಿಷ್ಠೆಯಿಂದ ಇರುತ್ತಿದ್ದರು. ಅರಸನ ಆಜ್ಞೆಯನ್ನು ಪಾಲಿಸುತ್ತಿದ್ದರು ಎಂಬುದನ್ನು ಅರಿಯಬಹುದಾಗಿದೆ.

ಇವತ್ತು ಇಂಗ್ಲಿಷಿನ `ಬಾರ್ಬರ್’ ಬದಲಿಗೆ `ಹೇರ್ ಡ್ರೆಸರ್ಸ್’ ಅಂದರೆ ಕೇಶವಿನ್ಯಾಸಕರೆಂದು ಕರೆದುಕೊಳ್ಳುತ್ತಿದ್ದಾರೆ. `ಬಾರ್ಬರ್’ ಎಂಬ ಪದವೂ ಲ್ಯಾಟಿನ್‍ನ `ಬರ್ಬಾ’ದ್ದಾಗಿದೆ. ಅಂದರೆ ಗಡ್ಡ ಎಂಬುದಾಗಿದೆ. ಗಡ್ಡವನ್ನು ಸುಂದರವಾಗಿ, ವಿನ್ಯಾಸಗೊಳಿಸುವ ಮತ್ತು ತಲೆಯ ಕೇಶವನ್ನು ಕತ್ತರಿಸಿ, ಅಂದವಾಗಿ ವಿನ್ಯಾಸಗೊಳಿಸುವುದರಿಂದ ಇವರುಗಳನ್ನು ಕೇಶವಿನ್ಯಾಸಕರೆಂತಲೂ ಕರೆಯುತ್ತಾರೆ.

ಫ್ರಾನ್ಸ್‍ನಲ್ಲಿ ಕ್ಷೌರಿಕರನ್ನು `ಕೋಇಫ್ಯೂರ್’ ಎಂದು ಕರೆಯುತ್ತಾರೆ. ಅಂದರೆ ಕೇಶವನ್ನು ಅಂದಗೊಳಿಸುವವ ಎಂದರ್ಥ. ಹಿಂದೂಸ್ತಾನಿ ಭಾಷೆಯಲ್ಲಿ `ನಾಯ್’ ಎನ್ನುವರು. ಇದು ಸಂಸ್ಕೃತದ `ನಾಪಿಕ’ ಪದದಿಂದ ಬಂದದ್ದಾಗಿದೆ. ಇದರರ್ಥ ಉಗುರು ಸ್ವಚ್ಛಗೊಳಿಸುವುದಾಗಿದೆ. ಅಲ್ಲದೆ `ನಹನ’ ಎಂಬ ಪದದಿಂದಲೂ ಬಂದಿದ್ದು, ತಿರಸ್ಕರಿಸಬಾರದೆಂಬ ಅರ್ಥವನ್ನು ಹೊತ್ತಿದೆ. ಜೊತೆಗೆ ಯಜಮಾನನ ಆಜ್ಞೆಯನ್ನು ಅನುಸರಿಸುವವನು ಎಂದೂ ಕೂಡ ಆಗಿದೆ.

ಇಷ್ಟಕ್ಕೂ ಕ್ಷೌರಿಕರು ಭೂಮಾಲೀಕರಲ್ಲ. ಆದರೆ ವೃತ್ತಿಪರರಾಗಿದ್ದಾರೆ. ಕೆಲವೆಡೆ ಮನೆಯಿಂದ ಮನೆಗೆ, ಊರಿಂದ ಊರಿಗೆ ಸಾಗಿ ಸೇವೆ ನೀಡುವ ಅಲೆಮಾರಿಗಳು ಆಗಿದ್ದಾರೆ. ಪಟ್ಟಣಗಳಲ್ಲಿರುವಂತೆ ಕ್ಷೌರದಂಗಡಿಯನ್ನು ಗ್ರಾಮೀಣ ಭಾಗದಲ್ಲಿ ತೆರೆಯದಿದ್ದರೂ, ಹಲವೆಡೆ ಒಂದೇ ಊರಿನಲ್ಲಿ ನೆಲೆನಿಂತು ಮನೆ, ಮನೆಗಳಿಗೆ ತೆರಳಿ ಕೇಶಮುಂಡನವನ್ನು ನಡೆಸುತ್ತಿದ್ದಾರೆ. ಜೊತೆಗೆ ಮಂಗಳ ಕಾರ್ಯಗಳಲ್ಲಿ, ಮಂಗಳವಾದ್ಯ ನುಡಿಸುವ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ. ಇಂದಿಗೂ ಹಣದ ಬದಲು ಧವಸ, ಧಾನ್ಯಗಳನ್ನು ಪಡೆಯುವ ಪರಿಹಾರವನ್ನು ಕೂಡ ಇಟ್ಟುಕೊಂಡಿದ್ದಾರೆ.

ಹಿಮಾಚಲ ಪ್ರದೇಶ ಸೇರಿದಂತೆ ಹಲವೆಡೆ ವಿವಾಹ ಸಂದರ್ಭಗಳಲ್ಲಿ ಇವರುಗಳನ್ನು ಅತ್ಯಂತ ವಿಶೇಷವಾಗಿ ಗೌರವಿಸಿ, ಪುರಸ್ಕರಿಸುವ ಪರಿಪಾಠವೂ ಇದೆ. ಕಾರಣ ವರನಿಗೆ ಇವರು ಅತ್ಯಾಪ್ತ ಸಲಹೆಗಾರ ಆಗಿರುತ್ತಾನೆ. ಅಲ್ಲದೆ ಒಡಹುಟ್ಟಿದವರಂತೆ ಕಂಡು ಶೃಂಗಾರಗೊಳಿಸಲು ಆಪ್ತನು ಆಗಿರುತ್ತಾನೆ. ಇಷ್ಟೇ ಅಲ್ಲದೆ ಇವರುಗಳನ್ನು ವರನ ತಾಯಿಯ ಸಹೋದರನಂತೆಯೂ ಭಾವಿಸಿ, ಗೌರವಿಸಿ ಅವರಿಂದ ಸಂಪ್ರದಾಯಬದ್ಧ ಶಾಸ್ತ್ರಗಳನ್ನು ಮಾಡಿಸುತ್ತಾರೆ.

ಇನ್ನೂ ಸೆಪ್ಟೆಂಬರ್‍ನಲ್ಲಿ ಬರುವ `ಸೈರಿ ಹಬ್ಬ’ದಲ್ಲಿ ಜನ ಸುಖ-ಶಾಂತಿ ಮತ್ತು ಸಮೃದ್ಧಿಯಿಂದ ಬದುಕಲೆಂದು ಇವರುಗಳು ವಿಶೇಷ ಪೂಜೆ ಮಾಡಿ ಪ್ರಾರ್ಥಿಸುತ್ತಾರೆ. ನಂತರ ಲಿಂಬೆಹಣ್ಣು, ಕುಂಕುಮ, ಅಕ್ಕಿ ಮತ್ತು ಹೂಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಮನೆಯಿಂದ, ಮನೆಗೆ ಕೊಂಡೊಯ್ಯುತ್ತಾರೆ. ಹೀಗೆ ಹೊತ್ತು ತರುವ ಬುಟ್ಟಿಗಳನ್ನು ಪ್ರತಿಯೊಬ್ಬರು ಮನೆ ಬಾಗಿಲಲ್ಲಿ ನಿಂತು ಗೌರವದಿಂದ ಬರಮಾಡಿಕೊಂಡು ಧವಸ-ಧಾನ್ಯ-ಹಣ ಕೊಟ್ಟು ಕಳುಹಿಸುವರು.