ಕಳಸ : ಹಿರೇಬೈಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಖಾಸಾಗಿ ಸಂಸ್ಥೆಗೆ ಹಸ್ತಾಂತರಿಸುವುದಕ್ಕೆ ಗ್ರಾಮಸ್ಥರ ಆಕ್ರೋಶ…

130
firstsuddi

ಕಳಸ : ತಾಲ್ಲೂಕಿನ ಹಿರೇಬೈಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಖಾಸಾಗಿ ಸಂಸ್ಥೆಗೆ ಹಸ್ತಾಂತರಿಸಲು ರಾತ್ರಿ ಬಂದಿರುವ ಅಧಿಕಾರಿಗಳನ್ನು ಗ್ರಾಮಸ್ಥರು ಒಟ್ಟು ಸೇರಿ ಹಿಮ್ಮೆಟ್ಟಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಆಸ್ಪತ್ರೆಯನ್ನು ಖಾಸಾಗಿ ಸಂಸ್ಥೆಗೆ ಹಸ್ತಾಂತರಿಸಲು ತಾಲ್ಲೂಕು ವೈದ್ಯಾಧಿಕಾರಿ ಡಾ|ಮಧುಸೂದನ್ ಬಂದಿದ್ದರು ಇದನ್ನು ತಿಳಿದ ನೂರಾರು ಗ್ರಾಮಸ್ಥರು ಜಮಾಯಿಸಿ ಪ್ರತಿಭಟಿಸಿ ಯಾವುದೇ ಕಾರಣಕ್ಕೂ ಆಸ್ಪತ್ರೆಯನ್ನು ಖಾಸಾಗಿಯವರಿಗೆ ವಹಿಸಬಾರದು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಎಂ.ಪಿ.ಗಿರೀಶ್ ಜಿಲ್ಲಾ ಆರೋಗ್ಯ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು. ಸ್ಥಳಿಯ ಸಾರ್ವಜನಿಕರ ಗಮನಕ್ಕೆ ತರದೆ ಗುಪ್ತವಾಗಿ ಅ 13ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಇಡಕಣಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಸುಧಾಕರ್ ಅ 15ರಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ದೂರನ್ನು ಸಲ್ಲಿಸಿದ್ದರು. ಮುಂದಿನ ಕ್ರಮಕ್ಕಾಗಿ ಕಾಯುತ್ತಿದ್ದಾಗ ಮೂಡಿಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ತರಾತುರಿಯಲ್ಲಿ ನಿನ್ನೆ ರಾತ್ರಿ ಆಗಮಿಸಿದ್ದಾರೆ. ಸುಸಜ್ಜಿತ ಮತ್ತು ಸುಸ್ಥಿರವಾಗಿದ್ದ ಆರೋಗ್ಯ ಕೇಂದ್ರವನ್ನು ಕದ್ದುಮುಚ್ಚಿ ಖಾಸಾಗಿಯವರಿಗೆ ವಹಿಸಲು ಸ್ಥಳಿಯ ಜಿಲ್ಲಾ ಪಂಚಾಯಿತಿ ಸದಸ್ಯರ ಹುನ್ನಾರವಾಗಿದೆ ಎಂದರು.
ಆರೋಗ್ಯ ಬಂಧು ಯೋಜನೆಯಡಿ ಸಿಬ್ಬಂದಿ ಕೊರತೆಯಿಂದ ನಿರ್ವಹಣಾ ಸಂಕಷ್ಟಕ್ಕೆ ತುತ್ತಾಗಿರುವ ಗ್ರಾಮೀಣ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ದಾನೇಶ್ವರಿ ಸೇವಾ ಸಂಸ್ಥೆ ಬೆಳಗಾವಿ ಇವರಿಗೆ ವರ್ಗಾಹಿಸಬಹುದಾಗಿದೆ. ಬಾಳೆಹೊಳೆಯಲ್ಲಿರುವ ಆಸ್ಪತ್ರೆಯನ್ನು ಸ್ಥಳೀಯರ ಸಮ್ಮತಿಯೊಂದಿಗೆ ಇದೇ ಸಂಸ್ಥೆಯ ನಿರ್ವಹಣೆಗೆ ನೀಡಲಾಗಿದೆ. ಇಂತಹ ಅನೇಕ ಆರೋಗ್ಯ ಕೇಂದ್ರಗಳು ಇದ್ದು, ಅವುಗಳನ್ನು ಈ ಸಂಸ್ಥೆಗೆ ವಹಿಸುವುದು ಬಿಟ್ಟು ಸುಸಜ್ಜಿತವಾಗಿರುವ, ಸಿಬ್ಬಂದಿ ಕೊರತೆ ಇರದ ಇತ್ತೀಚೆಗಷ್ಟೆ ಕಾಯಕಲ್ಪ ಪುರಸ್ಕøತವಾದ ಆರೋಗ್ಯ ಕೇಂದ್ರವನ್ನು ಖಾಸಾಗಿ ಸಂಸ್ಥೆಯ ನಿರ್ವಹಣೆಗೆ ವಹಿಸಲು ಮುಂದಾಗಿರುವುದು ಸರಿಯಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.
ಪ್ರಕ್ರಿಯೆಯಲ್ಲಿ ಆಗಿರುವ ಲೋಪದೋಷಗಳನ್ನು ಸ್ಪಷ್ಟವಾಗಿ ವಿವರಿಸಿ ಕೇಳಿದಾಗ ಉತ್ತರಿಸಾಗದೆ ಇದ್ದ ಆರೋಗ್ಯಾಧಿಕಾರಿ ಮತ್ತು ಅವರ ತಂಡ ಆಕ್ಷೇಪಣೆಯನ್ನು ಪರಿಶೀಲಿಸಲಾಗುವುದು ಎಂದು ಸಮಾಜಾಯಿಸಿ ನೀಡಿ ವಾಪಾಸ್ಸಾದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಿಜಯ ಗೌಡ, ರಾಜೇಶ್, ಉದಯ, ಸುನಿಲ್, ಗೋಪಾಲ ಗೌಡ ಇತರರು ಇದ್ದರು.