ಬೆಂಗಳೂರು : ಕಾಂಗ್ರೆಸ್ ನವರು ಬೇಕಾದರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ನೆಹರು ಹುಕ್ಕಾ ಬಾರ್ ತೆರೆಯಲಿ. ಈಗ ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನೆಹರು, ಇಂದಿರಾ ಗಾಂಧಿಯವರ ಒಳ್ಳೆಯ ಕೊಡುಗೆಗಳನ್ನು ನೆನೆಯುತ್ತೇವೆ. ಆದರೆ ಅವರು ಮಾಡಿದ್ದ ಎಲ್ಲವನ್ನೂ ಒಪ್ಪಿಕೊಳುವುದ್ದಕ್ಕೆ ನಾವೇನು ಗುಲಾಮರಲ್ಲ. ಕೋಟಿ ಕೋಟಿ ಹಣ ಖರ್ಚು ಮಾಡಿ ಕ್ಯಾಂಟೀನ್ ಕಟ್ಟಿದ್ದಾರೆ. ಅದೇನು ಫೈವ್ ಸ್ಟಾರ್ ಹೋಟೆಲ್ ಅಂದುಕೊಂಡಿದ್ದಾರಾ? ಅವರ ಎಟಿಎಂ ತುಂಬಿಸಿಕೊಳ್ಳಲು ತಂದಿರುವ ಯೋಜನೆಯನ್ನು ನಾವು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಈ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಗೆ ನಮ್ಮ ವಿರೋಧವಿದೆ. ರಾಜಕೀಯ ಕಾರಣಕ್ಕೆ ಇಂದಿರಾ ಹೆಸರನ್ನು ನಾಮಕರಣ ಮಾಡಿರುವುದಕ್ಕೆ ನಾವು ವಿರೋಧ ಮಾಡುತ್ತಿದ್ದೇವೆ ಎಂದರು.
ಇನ್ನೂ ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹುಕ್ಕಾ ಬಾರ್ ತೆರೆಯಲಿ ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ಇತಿಹಾಸ ಗೊತ್ತಿಲ್ಲ. ಯಾರಿಗೆ ಗೌರವ ಕೊಡಬೇಕು ಅನ್ನೋದು ಗೊತ್ತಿಲ್ಲ. ಗುಜರಾತ್ ಅಹಮ್ಮದಾಬಾದ್ ನಲ್ಲಿ ನರೇಂದ್ರ ಮೋದಿ ಹೆಸರು ಯಾಕೆ ಇಟ್ಟಿದ್ದಾರೆ. ದೆಹಲಿಯಲ್ಲಿ ಅರುಣ್ ಜೇಟ್ಲಿ, ವಾಜಪೇಯಿ, ದೀನ ದಯಾಳ್ ಉಪಧ್ಯಾಯ, ಸಾವರ್ಕರ್ ಹೆಸರೆಲ್ಲಾ ಯಾಕಿಟ್ಟರು. ಅವರ ಹೆಸರಲ್ಲಿ ಹುಕ್ಕಾ ಬಾರ್ ಇಡಬಹುದಲ್ಲ. ನಾನು ಹಾಗೆ ಹೇಳಲ್ಲ. ಅಷ್ಟು ಲಘುವಾಗಿ ಮಾತನಾಡಲ್ಲ ಎಂದು ಕಿಡಿಕಾರಿದರು.










