ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ : ಸಚಿವ ಈಶ್ವರಪ್ಪ.

102
firstsuddi

ಶಿವಮೊಗ್ಗ : ನಗರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು, ಸಿದ್ದರಾಮಯ್ಯನವರಿಗೆ ನಮ್ಮ ಸರ್ಕಾರದ ಒಂದೇ ಒಂದು ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಲು ಆಗಲಿಲ್ಲ. ಅವರು ವಿರೋಧ ಪಕ್ಷದ ನಾಯಕರಾಗಿರುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ನವರು  ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಈಶ್ವರಪ್ಪ ಅವರು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದವರು. ಆದರೂ ಅವರಿಗೆ ಯಾರನ್ನು ಹೇಗೆ ಮಾತನಾಡಿಸಬೇಕು, ಎಂಬುದೇ ಗೊತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ವಿದೂಷಕ ಎಂದಿದ್ದಾರೆ. ನೀವೊಬ್ಬರು ಮುಖ್ಯಮಂತ್ರಿ ಆಗಿದ್ದವರು ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯಿರಿ. ನನಗೂ ಲೇ ಸಿದ್ದರಾಮಯ್ಯ ಎಂದು ಕರೆಯಲು ಬರೋದಿಲ್ವಾ.  ಆದರೆ ನಾನು ಅಂತಹ ಪದ ಬಳಸುವುದಿಲ್ಲ. ಮುಖ್ಯಮಂತ್ರಿ, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಏಕವಚನ ಪದ ಬಳಸುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದರು.

ಕೊರೊನಾ ಸಂಬಂಧ ಸರ್ವಪಕ್ಷ ಸಭೆ ಕರೆದಿದಕ್ಕೆ ಡಿ.ಕೆ.ಶಿವಕುಮಾರ್ ಅವರು ಆಕ್ಷೇಪ ಮಾಡಿದರು. ಇದರಿಂದ ರಾಜ್ಯ ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಅರ್ಜೆಂಟ್ ಆಗಿ ಅಧಿಕಾರಕ್ಕೆ ಬರಬೇಕಿದೆ. ಬೇರೆ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡುವುದಕ್ಕೆ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು ಸರಿ ಅಲ್ಲ. ನಮ್ಮದು ಭಾರತೀಯ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಹಂಚಿ ತಿನ್ನುವುದಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸೋನಿಯಾ ಗಾಂಧಿಯನ್ನು ಸಂತೃಪ್ತಿ ಪಡಿಸುವುದಷ್ಟೇ ಆಗಿದೆ ಎಂದರು.

ಮಸ್ಕಿ, ಬಸವಕಲ್ಯಾಣದಲ್ಲಿ ಉಪ ಚುನಾವಣೆ ಪ್ರಚಾರದ ವೇಳೆ ಡಿ.ಕೆ.ಶಿವಕುಮಾರ್ ಅವರು ಪಕ್ಷಾಂತರಿಗಳಿಗೆ ಮತ ಹಾಕಬೇಡಿ, ಅವರು ಹಣ ಪಡೆದುಕೊಂಡು ಪಕ್ಷಾಂತರ ಮಾಡಿದ್ದಾರೆ ಎಂದು ಸಿದ್ದರಾಮಯ್ಯನವರು ಆರೋಪಿಸುತ್ತಿದ್ದಾರೆ. ಹಾಗಾದ್ರೆ, ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ಎಷ್ಟು ಕೋಟಿ ಹಣ ಪಡೆದಿದ್ದರು? ಎಂದು ಪ್ರಶ್ನೆ ಮಾಡಿದ್ದಾರೆ.